Saturday, September 14, 2013

ಸ್ವರ ಸಿಂಚನದ ರಾಗ ರಂಜನೆಯಲ್ಲಿ ರಚಿಸಿದ ಹಾಡು


ಆ ಸರಿಗಮದ ಸ್ವರದ ತಂತಿ ನರದಲಿ
ನಾ ಬಚ್ಚಿಟ್ಟ ರಾಗ ಕೊಂಚ ಕೊಂಚ ಹೊಮ್ಮಿದೆ
ಈ ಪಲ್ಲವಿಯ ಮೊದಲ ಸ್ವರದ ಪದದಲಿ
ಆ ನಿನ್ನ ಒಲವು ಅವಿತು  ಕುಳಿತು ಸೆಳೆದಿದೆ
ಓ ಒಲವೇ ....

ಈ  ಮನಸೆಂಬ ನವಿಲು ಗರಿಯ ಕೆದರಿ ಕುಣಿದಿದೆ
ಆ ನಿನ್ನ ಪ್ರೀತಿ ಸ್ಪರ್ಶ ಸೋಕಿದ್ಹರ್ಷದಿ
ನಾ ಕನಸಲ್ಲಿ ಕಾಣೋ ಸಹಜ ಸರಳ ಸುಂದರಿ
ನೀನೆಂದು ತಿಳಿದು ಹೃದಯಕ್ಕೀಗ ನೆಮ್ಮದಿ
ಓ ಚೆಲುವೇ ...

ಈ ಒಲವೆಂಬ ಮಧುರ ಪದ್ಯ ಸದ್ಯ ಕಾದಿದೆ
ಆ ಎರಡೆರಡು ಮನಸ ಮಧ್ಯ ಆಗೋ ಮಿಲನಕೆ
ಹೇ ಚೆಲುವಮ್ಮ ನೀನು ಚರಣವಿರದ ಕವನವೆ
ಆ ಕವನ ನಾನು ಕಣ್ಣ ತುಂಬಿಸಿಕೊಳ್ಳಲೆ
ಓ ಕನಸೇ ...


Tuesday, July 9, 2013

ಜಂಟಿಯತನ ಒಂಟಿಯತನವನ್ನು ಒಂಟೆಯ ಮೇಲೆ ಕೂರಿಸಿ ಓಡಿಸಿದಾಗ ಹುಟ್ಟಿದ ಹಾಡು


ಸರಿಗಮ ಸ್ವರದ ಮೇಲೆ
ಮನದ ಪ್ರೇಮ ಕುಣಿವ ವೇಳೆ
ಅರಿತು ಜೋಡಿಯ
ನರದ ನಾಡಿಯು
ಬರೆದ ಹಾಡಿದು
ಹಾಡುತ್ತಿರುವೆ ಕೇಳೆ ಚೆಲುವೆ

ಒಂಟಿಯತನಕೆ ವಂದನೆ ಹೇಳೋ ಸಮಯ
ಜಂಟಿಯ ಅಪ್ಪುಗೆ ಮನಕೆ ಆನಂದಮಯ
ಮುಗಿಲನು ಮುಟ್ಟಿ ಮುತ್ತನು ನೀಡುವೆ ಈಗ
ಮನದಲಿ ಮೂಡಿದೆ ಮದನನ ಮೀರಿಸೋ ವೇಗ
ಚಿನ್ನ ಎನ್ನಲಿ
ರನ್ನ ಎನ್ನಲಿ
ನಿನ್ನ ನೆನಪಲಿ
ನಿನಗೆ ಸೋತೆ... ಜಗವ ಮರೆತೆ

ಚಿಲಿಪಿಲಿ ಕೂಗೋ ಹಕ್ಕಿಯ ಒಳಗಡೆ ಸೇರಿ
ಅರಗಿಳಿ ನಿನ್ನ ಹುಡುಕುತ ಬರುವೆನು ಹಾರಿ
ಕುಹೂ ಕುಹೂ ಕೂಗೋ ಕೋಗಿಲೆ ಕೊರಳಲಿ ಸೇರಿ
ಕ್ಷಣ ಕ್ಷಣ ಕೂಗುವೆ ನಿನ್ನನೆ ಸಾವಿರ ಬಾರಿ
ದನಿಯ ಕೇಳುತ
ಸನಿಹ ಬಯಸುತ
ಇನಿಯನರಸುತ
ಒಮ್ಮೆ ಬಾರೆ.. ನನ್ನ ಸೇರೆ!!


ಸರಿಗಮ ಸ್ವರದ ಮೇಲೆ
ಮನದ ಪ್ರೇಮ ಕುಣಿವ ವೇಳೆ
ಅರಿತು ಜೋಡಿಯ
ನಾರದ ನಾಡಿಯು
ಬರೆದ ಹಾಡಿದು
ಹಾಡುತ್ತಿರುವೆ ಕೇಳೆ ಚೆಲುವೆ

Tuesday, March 26, 2013

ಕನಸು ಕಲಿಸಿ ಮನಸ ಕುಣಿಸಿದವನಿಗೆ...

ಕಣ್ಣಲಿ ಕನಸು ತುಂಬಿದವನೆ
ಕನಸಿಗೆ ಬಣ್ಣ ಹಚ್ಚಿದವನೇ
ಬಣ್ಣಕೆ ಮೆರಗು ಕೊಟ್ಟ ಒಡನೆ
ಕುಣಿದಿದೆ ನನ್ನ ಹೃದಯ ಮೆಲ್ಲನೆ
ಹಾಡುತ ನಿನ ಹೆಸರನು ಪ್ರತಿ ಉಸಿರಲಿ..

ನನ್ನ ಹೃದಯದ ಪಿಸುಮಾತನು
ಕದ್ದು ಕೇಳಿದ ನೀ ಚೋರನು
ಕೇಳಿಯೂ ನಾನು ಕಿವುದನು
ಎಂದು ನಟಿಸುವ ನೀ ಪೋರನು
ಎಲ್ಲಿದೆಯೋ ನನ್ನಲಿ ನನ್ನದೇ ಮನಸು
ಕೈ ಮುಗಿವೆ ನೀ ತಿಳಿ ನೀನೆ ನನ ಕನಸು
ಕಿರು ಬೆರಳ ಹಿಡಿದೆನ್ನನು ನಡೆಸು
ಮರು ಮಾತು ಆಡದೆ ಬರುವುದೀ  ಮನಸು

ನನ್ನ ಕಾಲ್ಗೆಜ್ಜೆಯು ಘಲ್ಲೆನುತ
ನಿನ ಹೆಸರನೆ ಕೂಗಿ ಹೇಳಿದೆ
ಕೈಯ ಬಳೆಗಳು ಝಲ್ಲೆನುತ
ನಿನ ದನಿಯನೆ ಪ್ರತಿಧ್ವನಿಸಿದೆ
ನಾ ತೊಡುವ ರೇಶಿಮೆಯ ಸೀರೆಯ ಸೆರಗನ್ನು
ಮೆಲ್ಲ ಎಳೆದರಳಸಿ ನೋಡು ಒಮ್ಮೆ ನೀನು
ಅಲ್ಲಿದೆಯೋ ನಿನ್ನದೇ ಮುಖವಿರುವ ಚಂದ್ರ
ಕೊಟ್ಟುಬಿಡು ನಿನ ಮನಸು ಹೃದಯದಿ ಬಚ್ಚಿಡುವೆ ಭದ್ರ!!

Friday, March 15, 2013

ಏರು ಪೇರು ಆದ ಮನಸ ಚೂರು ನೂರು ಪದದಿ ಬರೆದ ಹಾಡು



ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 
ನಿನ್ನ ನಡೆಯ ತಡೆದು ನೋಡು ನನ್ನ ಇವತ್ತು 
ಓಡೋ ನನ್ನ ಮಾನಸ ಸ್ಪೀಡು ನೂರ ಇಪ್ಪತ್ತು 
ಎಂದು ನಿನ್ನ ಬಂದು ಸೇರೋ ಎಂಬ ಅವಸರ 
ಎದೆಯ ಬಡಿತ ಏರುತಿದೆ ಸೊಂಯ್ಯ ಸರ ಸರ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

ನನ್ನ ಹೃದಯ ಥೇಟರಲ್ಲಿ ನಿನ್ನ ಸಿನೆಮವು 
ಓಡುತಿದೆ ನಿಲ್ಲದೇನೆ ಏನು ಮಹಿಮೆಯು 
ನನ್ನ ಮಾನಸ ಅಂಗಳದಿ ನಿನ್ನ ಆಟ 
ಸಾಗುತಿದೆ ಹೇಳುತ್ತಾ ಪ್ರೇಮ ಪಾಠ 
ಅ ಆ ಇ ಈ ಕೂಡ ಈಗ ಮರೆತು ಹೋಗಿದೆ 
ಒಂದು ನಾಲ್ಕು ಆರು ಎಂಟು ಮುಂದೆ ಏನಿದೆ 
ಅಯ್ಯೋ ರಾಮ ಎದ್ದು ಬಿದ್ದು ಹುಚ್ಚು ಹಿಡಿಯಿತ?
ದೂರ ನಿಂತು ಕದ್ದು ಕದ್ದು ಇವಳ ನೋಡುತ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

ಗಾಳಿ ಪಟದ ಹಾಗೆ ನೀನು ಮೇಲೆ ಹಾರಿದೆ 
ನಿನ್ನ ಹಿಂದೆ ನಾನು ಕೂಡ ತೇಲಿ ಬಂದೆ 
ಅರಿಯ ನಾನು ಹಾರಿದೆ ಹೋಯ್ತು ನನ್ನ ಸೂತ್ರ 
ಗಿರಕೆ ಹೊಡೆದು ಧರೆಗೆ ಬಿದ್ದೆ ನಾನು ಮಾತ್ರ 
ಗಂಧವನ್ನು ತಿದ್ದಿ ತೀಡಿ  ಅರೆದ ಅಂದವ 
ಬ್ರಹ್ಮ ಎಲ್ಲ ನಿಂಗೆ ಕೊಟ್ಟು ಮಾಡ್ದ ಮೋಸವ 
ಕುರುಹು ಕೂಡ ಸಿಗದ ರೀತಿ ಶುರುವು ಪ್ರೇಮ 
ಸನಿಹ ಎಂದು ಬರುವೆ ಪ್ರೀತಿ ಅಯ್ಯೋ ರಾಮ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ