Tuesday, March 26, 2013

ಕನಸು ಕಲಿಸಿ ಮನಸ ಕುಣಿಸಿದವನಿಗೆ...

ಕಣ್ಣಲಿ ಕನಸು ತುಂಬಿದವನೆ
ಕನಸಿಗೆ ಬಣ್ಣ ಹಚ್ಚಿದವನೇ
ಬಣ್ಣಕೆ ಮೆರಗು ಕೊಟ್ಟ ಒಡನೆ
ಕುಣಿದಿದೆ ನನ್ನ ಹೃದಯ ಮೆಲ್ಲನೆ
ಹಾಡುತ ನಿನ ಹೆಸರನು ಪ್ರತಿ ಉಸಿರಲಿ..

ನನ್ನ ಹೃದಯದ ಪಿಸುಮಾತನು
ಕದ್ದು ಕೇಳಿದ ನೀ ಚೋರನು
ಕೇಳಿಯೂ ನಾನು ಕಿವುದನು
ಎಂದು ನಟಿಸುವ ನೀ ಪೋರನು
ಎಲ್ಲಿದೆಯೋ ನನ್ನಲಿ ನನ್ನದೇ ಮನಸು
ಕೈ ಮುಗಿವೆ ನೀ ತಿಳಿ ನೀನೆ ನನ ಕನಸು
ಕಿರು ಬೆರಳ ಹಿಡಿದೆನ್ನನು ನಡೆಸು
ಮರು ಮಾತು ಆಡದೆ ಬರುವುದೀ  ಮನಸು

ನನ್ನ ಕಾಲ್ಗೆಜ್ಜೆಯು ಘಲ್ಲೆನುತ
ನಿನ ಹೆಸರನೆ ಕೂಗಿ ಹೇಳಿದೆ
ಕೈಯ ಬಳೆಗಳು ಝಲ್ಲೆನುತ
ನಿನ ದನಿಯನೆ ಪ್ರತಿಧ್ವನಿಸಿದೆ
ನಾ ತೊಡುವ ರೇಶಿಮೆಯ ಸೀರೆಯ ಸೆರಗನ್ನು
ಮೆಲ್ಲ ಎಳೆದರಳಸಿ ನೋಡು ಒಮ್ಮೆ ನೀನು
ಅಲ್ಲಿದೆಯೋ ನಿನ್ನದೇ ಮುಖವಿರುವ ಚಂದ್ರ
ಕೊಟ್ಟುಬಿಡು ನಿನ ಮನಸು ಹೃದಯದಿ ಬಚ್ಚಿಡುವೆ ಭದ್ರ!!

Friday, March 15, 2013

ಏರು ಪೇರು ಆದ ಮನಸ ಚೂರು ನೂರು ಪದದಿ ಬರೆದ ಹಾಡು



ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 
ನಿನ್ನ ನಡೆಯ ತಡೆದು ನೋಡು ನನ್ನ ಇವತ್ತು 
ಓಡೋ ನನ್ನ ಮಾನಸ ಸ್ಪೀಡು ನೂರ ಇಪ್ಪತ್ತು 
ಎಂದು ನಿನ್ನ ಬಂದು ಸೇರೋ ಎಂಬ ಅವಸರ 
ಎದೆಯ ಬಡಿತ ಏರುತಿದೆ ಸೊಂಯ್ಯ ಸರ ಸರ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

ನನ್ನ ಹೃದಯ ಥೇಟರಲ್ಲಿ ನಿನ್ನ ಸಿನೆಮವು 
ಓಡುತಿದೆ ನಿಲ್ಲದೇನೆ ಏನು ಮಹಿಮೆಯು 
ನನ್ನ ಮಾನಸ ಅಂಗಳದಿ ನಿನ್ನ ಆಟ 
ಸಾಗುತಿದೆ ಹೇಳುತ್ತಾ ಪ್ರೇಮ ಪಾಠ 
ಅ ಆ ಇ ಈ ಕೂಡ ಈಗ ಮರೆತು ಹೋಗಿದೆ 
ಒಂದು ನಾಲ್ಕು ಆರು ಎಂಟು ಮುಂದೆ ಏನಿದೆ 
ಅಯ್ಯೋ ರಾಮ ಎದ್ದು ಬಿದ್ದು ಹುಚ್ಚು ಹಿಡಿಯಿತ?
ದೂರ ನಿಂತು ಕದ್ದು ಕದ್ದು ಇವಳ ನೋಡುತ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

ಗಾಳಿ ಪಟದ ಹಾಗೆ ನೀನು ಮೇಲೆ ಹಾರಿದೆ 
ನಿನ್ನ ಹಿಂದೆ ನಾನು ಕೂಡ ತೇಲಿ ಬಂದೆ 
ಅರಿಯ ನಾನು ಹಾರಿದೆ ಹೋಯ್ತು ನನ್ನ ಸೂತ್ರ 
ಗಿರಕೆ ಹೊಡೆದು ಧರೆಗೆ ಬಿದ್ದೆ ನಾನು ಮಾತ್ರ 
ಗಂಧವನ್ನು ತಿದ್ದಿ ತೀಡಿ  ಅರೆದ ಅಂದವ 
ಬ್ರಹ್ಮ ಎಲ್ಲ ನಿಂಗೆ ಕೊಟ್ಟು ಮಾಡ್ದ ಮೋಸವ 
ಕುರುಹು ಕೂಡ ಸಿಗದ ರೀತಿ ಶುರುವು ಪ್ರೇಮ 
ಸನಿಹ ಎಂದು ಬರುವೆ ಪ್ರೀತಿ ಅಯ್ಯೋ ರಾಮ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

Friday, November 2, 2012

ಕನ್ನಡ ರಾಜ್ಯೋತ್ಸವದ ಹಾಡು


ಕುಹೂ ಕುಹೂ ಕೂಗುವ ಕೋಗಿಲೆ ದನಿಯಲು ಕೇಳಿದೆ ನನ್ನ ಕನ್ನಡ
ಸರಿಗಮ ಸೂಸುವ ವೀಣೆಯ ನಾದದಿ ಹೊಮ್ಮಿದೆ ನನ್ನ ಕನ್ನಡ
ಉಸಿರಾಡುವ ಗಾಳಿಯ ಕಣ ಕಣದಲ್ಲೂ ಕಂಪನು ಬೀಸಿದೆ ಕನ್ನಡ
ಮಗುವಿನ ತೊದಲ ಮಾತಲು ನುಲಿದಿದೆ ನನ್ನೀ ಭಾಷೆಯು ಕನ್ನಡ

ನೇಗಿಲ ಯೋಗಿಯು ಬಿತ್ತಿದ ಭತ್ತದ ತೆನೆ ತೆನೆಯಲ್ಲೂ ಕನ್ನಡ
ಈ ಮಣ್ಣಿನ ಮಗನ ಮೈಯಲಿ ಹರಿಯುವ ಪ್ರತಿ ಹನಿ ನೆತ್ತರು ಕನ್ನಡ
ಮುಂಜಾನೆಯ ಹೊತ್ತಲಿ ಹಕ್ಕಿಯ ಚಿಲಿಪಿಲಿ ಮಾತಲು ನುಲಿದಿದೆ ಕನ್ನಡ
ಏಳು ಬಣ್ಣದ ಕಾಮನ ಬಿಲ್ಲಿನ ಪ್ರಜ್ವಲ ಬೆಳಕಲು ಕನ್ನಡ

ಕವಿ ಕೊಟಿಯು ರಚಿಸೋ ಕವನವ ಕಂಡರೆ ಪ್ರತಿ ಪದದಲ್ಲೂ ಕನ್ನಡ
ಸಂಗೀತ ಋಷಿಗಳು ಹಾಡುವ ಪ್ರತಿ ಹಾಡಿನ ಸ್ವರದಲು ಕನ್ನಡ
ಮೈ ತುಂಬಿ ಹರಿಯುವ ಕಾವೇರಿ ತಾಯಿಯ ಜುಳು ಜುಳು ನಾದವು ಕನ್ನಡ
ತಂಪಾದ ಗಾಳಿಗೆ ತಲೆಯನು ತೂಗೋ ಹಸಿರೆಲೆ ಬೀಸಿದೆ ಕನ್ನಡ

ಈ ಕರುನಾಡಿನ ಕೆಚ್ಚೆದೆ ಗಂಡಿನ ಹೃದಯವ ಬಗೆದರು ಕನ್ನಡ
ಈ ನೆಲದಲ್ಲಿ ಹುಟ್ಟಿದ ಮನುಜನು ತೋರುವ ಪ್ರೀತಿಲು ಕನ್ನಡ
ಕಲ್ಲಿನ ಕೋಳಿ ಕೂಗಿದರು ಕೂಡ ಕೇಳುವುದೊಂದೇ ಕನ್ನಡ
ಪ್ರಳಯವೇ ಆದರು ಉಳಿಯಲೇಬೇಕು ಮಾತನು ಕೊಟ್ಟ ಕನ್ನಡ!!

Sunday, October 21, 2012

ಇಡ್ಲಾ ಮಾಡ್ಲಾ ಹಾಡ್ ಬರೀಲಾ ಅಂದಾಗ ಬಂದ ಹಾಡು


ಡ್ರಾಮ ಚಿತ್ರದ "ಚೆಂದುಟಿಯ ಪಕ್ಕದಲ್ಲಿ" ಹಾಡಿನ ರಾಗದಲ್ಲಿ!


ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?
ಹಾರಾಡೋ ಹಕ್ಕಿಗಳ ರೆಕ್ಕೆಗಳ ಕಟ್ಟಿಟ್ಟು ನಿನ ಜೊತೆ ಆಗಸದಿ ತೇಲಾಡ್ಲಾ?
ಕಣ್ ಮುಚ್ಚಿ ನಿನ ನೆನೆದ ನೆನಪಿಂದ
ನಾ ಬರೆದ ನಾನಿರುವ ಕನಸೊಂದ
ನಿನ ಕಣ್ಣ ಕೊನೆಯಲ್ಲಿ ಬಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ತಂಪಾದ ಈ ಹೊತ್ತು ತಂಗಾಳಿ ಬೀಸುತಿದೆ ಹಿಡಿದಿಡಿದು ನಿನ ಉಸಿರ ಜೊತೆಯಲ್ಲಿ ಬೆರೆಸ್ಲಾ?
ರೇಶಿಮೆಯ ಚೆಲುವನ್ನು ಎಣೆದೆಣೆದು ನಾ ತಂದು ನಿನ ಸೀರೆ ಸೆರಗಲ್ಲಿ ಚಿಟ್ಟೆಯಾಗ್ ಇಡ್ಲಾ?
ನನ್ನೆದೆಯ ಗೂಡಲ್ಲಿ ಗುಡಿಯೊಂದು
ಕಟ್ಟಿರುವೆ ನಿನ್ನನ್ನೇ ನೆನೆ ನೆನೆದು
ನಿನ ಚಿತ್ರವ ಅಲ್ಲಿ ಕೆತ್ತಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಹೂದೋಟ ಅಲ್ಲಿಹುದು ಹೂವೆಲ್ಲ ಅರಳಿಹುದು ಪ್ರತಿಯೊಂದು ಹೂವಲ್ಲು ನಾ ಕಂಡೆ ನಿನ್ನ
ಇರುಳಲ್ಲು ಕಂಡಿಹುದು ನಿನ್ನಲ್ಲಿಗೆ ದಾರಿ ಕಣ್ಮುಚ್ಚಿ ಬಂದಿರುವೆ ಬರಮಾಡೆ ನನ್ನ
ಬೆಟ್ಟದ ಮೇಲಿರುವ ಸಿಹಿ ಜೇನ
ನಿನಗಾಗಿ ನಾನೀಗ ತರಲೇನ?
ನಿನ ತುಟಿಯಲಿ ಅದನು ಮುಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಆ ಮೋಡದಂಚಿಂದ ಮೈ ಮರೆತು ಜಾರಿದ ಮೊದ ಮೊದಲ ಮಳೆ ಹನಿಯು ನೀನೇನಾ ಚೆಲುವೆ?
ಮಳೆ ಹನಿಯು ತಾಗುತಲಿ ಮನ ಬಿಚ್ಚಿ ಹಾಡುವ ಕೋಗಿಲೆಯ ದನಿಯನ್ನು ಕೈ ಮುಚ್ಚಿ ತಡೆವೆ
ಹಾಡೊಂದ ನಾನೀಗ ಬರೆದಿರುವೆ
ಪ್ರತಿ ಪದದಿ ನಿನ್ಹೆಸರೆ ತುಂಬಿರುವೆ
ನಿನ ಮುಂದೆ ಅದನೀಗ ನಾ ಹಾಡ್ಲಾ ?

Thursday, October 18, 2012

ಕೊಟ್ರೆ, ಕೊಡಬೇಕು.. ಕೊಟ್ರೆ ಕೊಡಿಸ್ಕೊಳ್ಳಲು ಬೇಕು..

ಡ್ರಾಮ ಚಿತ್ರದ "ಬೊಂಬೆ ಆಡ್ಸೋನು" ಹಾಡಿನ ರಾಗದಲ್ಲಿ...



ಡೈಲಾಗ್:   ಅವಳು ಸ್ಮೈಲ್ ಕೊಡ್ತಾಳೆ.. ಕೊಡಬೇಕು
                ಲವ್ ಯು ಅಂತಾಳೆ.. ಯು ಟೂ ಅನ್ಬೇಕು
                ಕೈ ಕೊಡ್ತಾಳೆ... ಕೊಡಿಸ್ಕೋ ಬೇಕು ಹ ಹ ಹ ಹ


ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?
ಪ್ರಳಯ ಅನ್ನೋದು ಆದ್ರು ಆಗ್ಬೋದು
ಹಳೆಯ ಡವ್ವು ಮತ್ತೆ ಸಿಗದು
ಒಂದನೇ ಕ್ಲಾಸಲಿ ಅಳಸಿ ಅಳಸಿ ಅ ಆ ಬರೆದಂತೆ
ಹಿಂದು ಮುಂದು ನೋಡದೆ ಬ್ರಹ್ಮ ವಿಧಿಯ ಬರೆದ್ನಂತೆ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಕಾಲರು ಎತ್ತು ಕೊಂಡು
ಕಲ್ಲರು ಹುಡುಗಿಗೆ
ಫ್ಲವರ್ ಕೊಟ್ಟಾಯ್ತು
ಪವರ್ ಬಂದಾಯ್ತು
ಮೈಲಿಯ ದೂರದಿ
ಸ್ಮೈಲನು ಕೊಟ್ಟಳು
ಮೈ ಎಲ್ಲ ಜುಮ್ಮಂತು
ಡೈಲಿ ರೂಟೀನ್ ಆಯ್ತು
ಹೂ ಖಾಲಿ ಆದಮೇಲೆ ಟೈಮ್ ಪಾಸು ಲವ್ವು ಅನ್ನೋದೇ
ಈ ನನ್ನ ಹಾರ್ಟಿನಲ್ಲಿ ಕಳ್ಳಿ ಗಿಡ ಊಣೋದೇ
ರಾಕೆಟ್ಟು ಬಿಟ್ಟು ಚಂದ್ರ ಲೋಕಕ್ಕೂಗ್ಬೋದು
ನಮ್ ಪಾಕೆಟ್ಟು ಖಾಲಿ ಇದ್ರೆ ಪ್ರೀತಿ ಸಿಗದು

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಮನಸೊಂದು ಇದ್ದರೆ
ಮಾರ್ಗಾನು ಐತಂತೆ
ಆ ಮನಸೇ ಕಳೆದೊದ್ರೆ
ಸ್ವರ್ಗಾನು ನರಕದಂತೆ
ಈ ಹಾಳು ಹೃದಯಕ್ಕೆ
ಬೇಕಿತ್ತಾ ಮೊಹಬತ್ತು
ಬೂದಿನ ಮುಚ್ಚಿರೋ
ಕೆಂಡದಂತ ಆಪತ್ತು
ಸೆರಗಲ್ಲಿ ಕೆಂಡ ಕಟ್ಕೊಂಡು ತಣ್ಣಗಿರೋಕಾಯ್ತದ
ಹಾರ್ಟಲ್ಲಿ ಹುಡುಗಿ ಇಟ್ಕೊಂಡು ಕಣ್ಣೀರ್ ಹಾಕದಿದ್ರಾಯ್ತದ
ಆಟಮ್ಮು ಬಾಂಬು ಬಿದ್ರೆ ದೇಶ ಹೋಯ್ತದೆ
ಪ್ರೀತಿಲಿ ಚೊಂಬು ಸಿಕ್ರೆ ಜಗವೇ ಸಾಯ್ತದೆ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?
ಪ್ರಳಯ ಅನ್ನೋದು ಆದ್ರು ಆಗ್ಬೋದು
ಹಳೆಯ ಡವ್ವು ಮತ್ತೆ ಸಿಗದು
ಒಂದನೇ ಕ್ಲಾಸಲಿ ಅಳಸಿ ಅಳಸಿ ಅ ಆ ಬರೆದಂತೆ
ಹಿಂದು ಮುಂದು ನೋಡದೆ ಬ್ರಹ್ಮ ವಿಧಿಯ ಬರೆದ್ನಂತೆ

Friday, September 28, 2012

ಕುಹೂ ಕುಹೂ ಕೋಗಿಲೆ ಕೂಗಿದಾಗ ಕೈ ಗೀಚಿದ ಹಾಡು


ಕುಹೂ ಕುಹೂ ಕೋಗಿಲೆ ಕೂಡ
ಉಹೂ ಉಹೂ ಅಂತಿದೆ ನೋಡ
ನಿನ್ನಯ ದನಿಯನು ಕೇಳಿ
ತಾ ಹಾಡಲು

ಮಿರ ಮಿರ ಮಿರುಗುವ ಚಿನ್ನ
ಮರುಗಿದೆ ನೋಡುತ ನಿನ್ನ
ಸೊರಗಿದೆ ಅದರದೇ ಬಣ್ಣ
ಎದುರು ನೀನಿರಲು

ಫಳ ಫಳ ಹೊಳೆಯುವ ಚುಕ್ಕಿ
ಅಳುತಿದೆ ನೋವಿಗೆ ಸಿಲುಕಿ
ಹೊಳೆಯುವ ನಿನ್ನಯ ನಗೆಯ
ಮಿಂಚು ಸೋಕಲು

ಸುಡು ಸುಡು ಸುಡುತಿರೋ ಸೂರ್ಯ
ಅಡಗಿದ ಎಲ್ಲೋ ನೋಡೆಯ
ನಿನ್ನಯ ಕಾಂತಿಯ ಕಿರಣ
ಅವನ ಇರಿಯಲು

Tuesday, August 14, 2012

ಸ್ವಾತಂತ್ರ್ಯ ದಿನದ ಸಲುವಾಗಿ ಸುರಿದ ಹಾಡು



ನನ್ನ ದೇಶವು
ಭಾರತ ದೇಶವು
ನನ್ನ ದೇಶವು
ಪುಣ್ಯ ಭೂಮಿ
ಭಾರತೀಯನ ಮಾತೃ ಭೂಮಿ
ಖಂಡ ಖಂಡಗಳ ಕಂಡರೂ ಸಿಗದು
ಮಣ್ಣ ಮುಟ್ಟಿದರೆ ಪಾಪವು ಕಳೆವುದು
ಭಾರತಿಯೇ.. ನಿನ ಕೀರುತಿಯ..
ಸಾರುವುದೇ.. ನಿಂಗೆ ಆರತಿಯು..

ನನ್ನ ದೇಶವು
ಪುಣ್ಯ ಭೂಮಿ
ಭಾರತೀಯನ ಮಾತೃ ಭೂಮಿ

ಶಾಂತಿ ಧಾಮ ನಿನ ಮಡಿಲು
ಕೆಣಕಿದರೆ ನೀ ಬರ ಸಿಡಿಲು
ಕೋಟಿ ಕೋಟಿ ದೈವಾನುಭೂತಿಯೇ
ಭಾರತ ಮಾತೆಯ ವಿಭೂತಿಯು
ಶಾಂತಿ ದೂತ ಮಹಾತ್ಮರು
ಸಿಂಹ ಬಲದ ಕ್ರಾಂತಿ ವೀರರು
ನಿನ್ನ ರಕ್ಷಣೆಗೆ ನಿಂತಿಹರು
ಶತ್ರು ಯಾರಿರಲಿ ಸೋಲುವರು
ಹಿಮಾಲಯ ಬಿಳಿಯಾಗಿ
ತೋರಿದೆ ನಿನ್ನಯ ತಿಳಿ ಮನಸ
ಜ್ಞಾನದ ಸಂಪತ್ತು
ಹೇಳಿದೆ ನಿನ್ನಯ ಇತಿಹಾಸ
ಸ್ವರ್ಗವೇ ಇಲ್ಲಿದೆ
ಕೈ ಅನು ಮುಗಿದು ಬಾ
ಎಲ್ಲಿಯೂ ಕಾಣದ
ದೈವವ ನೋಡು ಬಾ
ಭಾರತ ಮಡಿಲಲಿ


ಭಾರತ ದೇಶವು
ಪುಣ್ಯ ಭೂಮಿ

ಹಿಂದೂ ಮುಸ್ಲಿಮ ಎರಡಲ್ಲ
ಬೌಧ ಜೈನ ಕ್ರಿಸ್ತ ಬೇಧವಿಲ್ಲ
ನಿನ್ನಯ ಮಕ್ಕಳು ನಾವೆಲ್ಲಾ
ಭಾರತೀಯರೇ ಇಲ್ಲೆಲ್ಲಾ
ಸಂಪ್ರದಾಯದ ಸಂಸ್ಕೃತಿಯು
ಕಾಣರು ಯಾರು ಮತ್ತೆಲ್ಲಿಯು
ವಿಜ್ಞಾನ ಗಣಿತ ಜ್ಞಾನದಲಿ
ನಿನಗೆ ನೀನೆ ಸರಿಸಾಟಿಯು
ಕಾಶ್ಮೀರವೇ ಕಿರೀಟವು
ಕನ್ಯಾಕುಮಾರಿ ಕಾಲುಂಗುರ
ಈ ಗಾಳಿ ನೀರು ಇರೋ ತನಕ
ನಿನ್ನಯ ಚರಿತ್ರೆಯು ಅಮರ
ಸತ್ತರೂ ಇಲ್ಲಿಯೇ
ಹುಟ್ಟುವ ಹಂಬಲ
ಹುಟ್ಟಿದ ಕೂಡಲೇ
ಮಣ್ಣನು ಮೂಸುತ
ನಗುವೆನು ನಲಿಯುತ

ನನ್ನ ದೇಶವು
ಭಾರತ ದೇಶವು
ನನ್ನ ದೇಶವು
ಪುಣ್ಯ ಭೂಮಿ
ಭಾರತೀಯನ ಮಾತೃ ಭೂಮಿ
ಖಂಡ ಖಂಡಗಳ ಕಂಡರೂ ಸಿಗದು
ಮಣ್ಣ ಮುಟ್ಟಿದರೆ ಪಾಪವು ಕಳೆವುದು
ಭಾರತಿಯೇ.. ನಿನ ಕೀರುತಿಯ..
ಸಾರುವುದೇ.. ನಿಂಗೆ ಆರತಿಯು..