Thursday, November 9, 2017

ವಿರಹದ ಬರಹದಲ್ಲಿ ಪ್ರೇಮದ ವಿನಃ ಬೇರೇನೂ ಇಲ್ಲದೆ ಬರೆದ ಹಾಡು


ಪ್ರೇಮ ಬರಹ ಚಿತ್ರದ ಟೈಟಲ್ ಟ್ರ್ಯಾಕ್ ರಾಗಕ್ಕೆ ಬರೆದ ಹಾಡು 


ಗಂ: ಪ್ರೇಮಬರಹ... ಬರೆವ ತವಕ 
        ಇರದೇ ಸನಿಹ... ಮನ ತುಂಬಾ ಮರುಕ 
        ನಯನಗಳು ನೋಡಲು ಕಾಯುತಿದೆ 
        ಹೃದಯವಂತೂ ಸೇರಲು ಬಯಸುತಿದೆ 
        ತೋಳಲಿ ಬಳಸಲು ತುಡಿಯುತಿದೆ 
        
ಹೆ:  ಪ್ರೇಮಬರಹ... 
       ಇನಿಯ... ನಿನ ಒಲವಿನ ಓಲೆಯು... 
       ನನ ಮನದೊಳಗೆ ಕಚಗುಳಿ ಇಡುತ 
       ಸಿಹಿ ದಾಳಿ ಮಾಡಿದೆ.. 
       ನಿನ ನೆನಪೇ ಕಾಡಿದೆ... 

ಗಂ: ಎದೆಯ ಗುಡಿಯಲ್ಲಿ 
        ನಡೆಯೋ ಉತ್ಸವಕೆ 
        ನೀ ಬರೆದ ಸ್ವರಗಳೇ 
        ಹೂವಿನ ಮಾಲೆಯು ನೋಡಿದೆಯಾ 

ಹೆ:  ಹೃದಯದರಸ ನೀನು 
       ಎದುರಲಿ ಇಲ್ಲದಿದ್ದರೇನು
       ಇನಿಯ.... ನಿನ ಸ್ಪರ್ಶಕೆ ಕಾದಿಹೆನು... 
ಗಂ: ಆ ವಿರಹವದು ಅಗೋ ಸೋತಿಹುದು 
        ನಮ್ಮ ಪ್ರೀತಿ ನೋಡುತ 
        ತಲೆ ಬಾಗಿ ನಮಿಸುತಾ 


Tuesday, August 16, 2016

ಸವಿಯಾದ ಕವಿಯಾಗಿ ಕವಿತೆಯ ಬರೆದಾಗ ಬಂದ ಹಾಡು
ಮುಂಗಾರು ಮಳೆ ೨ ಚಿತ್ರದ "ಸರಿಯಾಗಿ ನೆನಪಿದೆ ನನಗೆ" ಹಾಡಿನ ರಾಗದಲ್ಲಿ... 


ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 
ಪುಟದ ಮೇಲೆ ಚೆಲ್ಲುತಿರುವ 
ಪದದ ಜೀವಾಳ 
ಸ್ವರಗಳ ಪೋಣಿಸಿ... ನರದಲಿ ಜೋಡಿಸಿ 
ಹಾಡು ಮೂಡುತಿದೆ.. ಬಾರೆ ಸನಿಹ 

ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 

ವರ್ಣಮಾಲೆಯು ನಂಗೆ ಸಾಲದು 
ನಿನ್ನ  ಚಂದವ ಪದದಿ ಹೇಳಲು 
ರವಿಯು ಕಾಣದ ಮಾಯಾಲೋಕದ 
ರಾಜ್ಯಭಾರಕೆ ರಾಣಿ ನೀನೇನಾ 
ಕವಿಯಾದೆ ನಾನೀಗ ನಿನ ನೋಡಲು 
ಸವಿಯಾದ ನಿನ ಸ್ಪರ್ಶವ ಸೋಕಲು 
ಕಾರಣ ಇಲ್ಲದೆ... ಕವಿತೆಯು ಹುಟ್ಟಿದೆ 
ಹೆಸರಿಡುತಿರುವೆ ಏನಿರಬಹುದು? 

ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 

ನಿನ್ನ ಬಣ್ಣದ ಉಪಮೇಯಕೆ 
ಉಪಮಾನವ ಎಲ್ಲಿ ಹುಡುಕಲಿ
ಸೊಗಸಾಗಿರೋ ನಿನ್ನ ರೂಪಕೆ 
ಛಂದಸ್ಸಾದರು ಸೋಲಬೇಕಿದೆ 
ವ್ಯಾಕರಣಕೆ ಏನೇನು ಗೊತ್ತಿಲ್ಲ 
ನಿನ್ನ ಬಣ್ಣಿಸೋ ಪದಗಳೇ ಸಿಗ್ತಿಲ್ಲ 
ಹರಿಹರ ರಾಘವ.. ರನ್ನರು ಪಂಪರು 
ನೋಡಿರದ ಚೆಲುವು ನೀನಾ ಚೆಲುವೆ?

ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 


Monday, July 20, 2015

ಮಂದಾರ ಮೊಗದ ಮದನಾರಿ ಮನಸ ನೆನಪಲ್ಲಿ ಬರೆದ ಹಾಡು


ರಂಗಿತರಂಗ ಚಿತ್ರದ "ಕರೆಯೋಲೆ ಕರೆವ ಓಲೆ" ಹಾಡಿನ ರಾಗದಲ್ಲಿ... 

ಮಲೆನಾಡ ಮಧ್ಯದಲ್ಲಿ ಮಲೆ ಮೇಲಿನ ಮನೆಯಲ್ಲಿ 
ಮನಸಾರೆ ಮೆಚ್ಚಿಕೊಂಡ ಮನದಾಕೆ ಮಡಿಲಲ್ಲಿ 

ಮಲಗಿದ ಎನ್ನ ಮನದಲಿ ಮೂಡಿದೆ ಮಲ್ಲಿಗೆ ಮೊಗದ ಚಿತ್ತಾರ 
ಮೋಹಕ ಮಾತಲಿ ಮರುಳನು ಮಾಡಿ ಮಿರ ಮಿರ ಮಿಂಚಿದೆ ಮಂದಾರ 

ಮಲೆನಾಡ ಮಧ್ಯದಲ್ಲಿ ಮಲೆ ಮೇಲಿನ ಮನೆಯಲ್ಲಿ 

ಮದುವೇಲಿ ಮದುಮಗಳಾಗಿ ಮನದೆದುರು ಬಂದೋಳೆ 
ಮದುವೆನೇ ಮರೆಸಿ ನನ್ನ ಮನಸನ್ನೆ ಕದ್ದೋಳೆ 

ಮದುಮಗನ ಮನೆಯಲ್ಲೆಲ್ಲರ ಮನಸನ್ನೆ ಗೆದ್ದೋಳೆ 
ಮೃದುವಾದ ಮಾತಿನಿಂದ ಮನೆಯನ್ನೇ ಬೆಳಗೋಳೆ 

ಮರುಭೂಮಿ ಮೂಲೆಯಲ್ಲಿ ಮಳೆನೀರ ಮರೆಯಲ್ಲಿ 
ಮೋಡಿನ ಮಾಡಿದ ಮೊಗದ ಮದನಾರಿ ಮಡಿಲಲ್ಲಿ 

ಮಲಗಿದ ಎನ್ನ ಮನದಲಿ ಮೂಡಿದೆ ಮಲ್ಲಿಗೆ ಮೊಗದ ಚಿತ್ತಾರ 
ಮೋಹಕ ಮಾತಲಿ ಮರುಳನು ಮಾಡಿ ಮಿರ ಮಿರ ಮಿಂಚಿದೆ ಮಂದಾರ 

ಮಲೆನಾಡ ಮಧ್ಯದಲ್ಲಿ ಮಲೆ ಮೇಲಿನ ಮನೆಯಲ್ಲಿ 

Monday, June 9, 2014

ಜೀವದ ಜೀವ ಜೀವಾಮೃತ ಕೊಟ್ಟಾಗ ಜಿನುಗಿದ ಹಾಡು
ಸೋತಿದೆ ಮನಸು  ನೋಡುತ ನಿನ್ನ
ರೂಪದ ಕಲ್ಪನೆ ಕಾಡುತ ನನ್ನ
ಈ ನರ ನಾಡಿಯು ಹಾಡಿದೆ ಸ್ವರವ
ಸ್ವರಗಳ ಬಣ್ಣನೆ ನಿನ್ನಯ ಚೆಲುವ
ನನ್ನ ಕಲ್ಪನೆ.. ಎಲ್ಲ ಯೋಚನೆ.. ನೀನೇನೆ ಮಾಯಾಂಗನೆ
ಹೃದಯದ ಈ ಗೂಡಿಗೆ ಯಜಮಾನಿಯ ಅರೆ ನೀನೇನೆ

ಕಣ್ಣಲಿ ಮಿನುಗುವ ಮಿರ ಮಿರ ಮಿಂಚು
ಹೂಡಿದೆ ನನ್ನನೆ ಕೊಲ್ಲುವ ಸಂಚು
ತುಟಿಗಳ ನಡುವಲಿ ಹೂವಿನ ರೂಪ
ನನ್ನನೆ ಸೆಳೆಯುವ ಪ್ರೀತಿಯ ಕೂಪ
ನನ್ನ ಕೊಲ್ಲದೆಯೆ ಇತ್ತ ಬದುಕಿಸದೆ
ಮನ ನಿನ್ನಯ ನೆರಳಲಿ ನರಳುತಿದೆ
ನನ್ನ ಕಲ್ಪನೆ.. ಎಲ್ಲ ಯೋಚನೆ.. ನೀನೇನೆ ಮಾಯಾಂಗನೆ
ಹೃದಯದ ಈ ಗೂಡಿಗೆ ಜೀವಾಮೃತ ನೀನೇನೆ

ನಿನ್ನ ನಡೆ  ಬೆಕ್ಕನು ಕೂಡ ನಾಚಿಸಿದೆ
ನಡೆಯ ನೋಡಿ ನಯನ ನೂರು ನನಸು ನೋಡಿದಂಗೆ
ಕನಸು ಕಣ್ಣ ಮುಂದೆ ಓಡಿದಂಗೆ
ನಲ್ಲೆ ಹೃದಯದಲ್ಲೇ ಒಮ್ಮೆ  ನೆಲಸು ಅಲ್ಲೇ
ಈ ಒಣಗಿದ ಮನವನು ತಣಿಸುತಲೇ


ನನ್ನ ಕಲ್ಪನೆ.. ಎಲ್ಲ ಯೋಚನೆ.. ನೀನೇನೆ ಮಾಯಾಂಗನೆ
ಹೃದಯದ ಈ ಗೂಡಿಗೆ ವರ್ಷಧಾರೆ ನೀನೇನೆ

 

Wednesday, February 19, 2014

ನವಿರಾದ ಪ್ರೇಮದ ನಿವೇದನೆಗೆ ನಿರುತ್ತರದ ನಿರಾಸೆಯಾಗದಿದ್ದಾಗ ನುಲಿದ ಹಾಡುಹೃದಯದ ಈ ಮೊದಲ ಪುಟದಲಿ 
ಮೂಡಿರೋ ಮುದ್ದಾದ ಪದದಲಿ 
ತುಂಬಿದೆ ನೀನಾಡೋ ಚಿಲಿಪಿಲಿ 
ನಾದ ಕೇಳೆಯಾ..?
ತಂಗಾಳಿ ಮೈಯ ಸೋಕಲು 
ತಾನಾಗೆ ಕಣ್ಣು ಮುಚ್ಚಲು 
ನೀನ್ಯಾಕೆ ನನ್ನ ಕಾಡುವೆ 
ಚೆಲುವೆ...?

ಬೆಳ್ಳಿ ಮೋಡ ನಡುವಲಿ ಓಡಿ
ಚುಕ್ಕಿ ತಾರೆ ಉಡುಗೊರೆ ನೀಡಿ 
ನನ್ನ ಪ್ರೀತಿ ನಿನ್ನ ಎದುರು ನಾ ತೋರಲೇ??
ಇಲ್ಲ ಎಂದು ತೊರೆಯದೆ ನನ್ನ  
ಒಂದೊಮ್ಮೆ ನೋಡು.. ಈ ನನ್ನ ಪಾಡು 
ನೀನಿಲ್ಲದ ಹೃದಯ.. ಮಿಡಿಯುವುದ ಮರೆತಿದೆ.. 

ಎಲ್ಲೋ ಇರುವ ಬೆಟ್ಟದ ಮೇಲೆ 
ನಿಂತು ಕಾಣೋ ಹಸಿರಿನ ಸಾಲೆ 
ನನ್ನ ಪ್ರೀತಿ ಅಗಲ ಎದುರು ಬಲು ಚಿಕ್ಕದು 
ಕ್ಷಣ ಕೂಡ ತಡವನು ಮಾಡದೆ 
ಬಾ ನನ್ನ ಒಪ್ಪು ಈ ಮನವ ಅಪ್ಪು 
ಉಸಿರಾಗುವೆ ನಿಂಗೆ.. ನನ್ನುಸಿರು ಇರೋವರೆಗೂ 


ಕನಸಲಿ ನಾ ಕೋರೋ ಹುಡುಗನ 
ಎದುರಲಿ ತಂದಿಟ್ಟ ದೇವನ 
ಮನದಲಿ ನೆನೆಯುತ್ತ ಹಾಡುವೆ 
ಒಮ್ಮೆ ಕೇಳೆಯಾ.. ?
ಆ ಬಾನು ಸೀಳಿ ಹೋಗಲಿ 
ಈ ಭೂಮಿ ಬಿರಿದು ಹೋಗಲಿ 
ನಾ ನಿನ್ನ ತೋಳಲೇ ಇರುವೆನು 
ಬಾರೋ...!
Saturday, September 14, 2013

ಸ್ವರ ಸಿಂಚನದ ರಾಗ ರಂಜನೆಯಲ್ಲಿ ರಚಿಸಿದ ಹಾಡು


ಆ ಸರಿಗಮದ ಸ್ವರದ ತಂತಿ ನರದಲಿ
ನಾ ಬಚ್ಚಿಟ್ಟ ರಾಗ ಕೊಂಚ ಕೊಂಚ ಹೊಮ್ಮಿದೆ
ಈ ಪಲ್ಲವಿಯ ಮೊದಲ ಸ್ವರದ ಪದದಲಿ
ಆ ನಿನ್ನ ಒಲವು ಅವಿತು  ಕುಳಿತು ಸೆಳೆದಿದೆ
ಓ ಒಲವೇ ....

ಈ  ಮನಸೆಂಬ ನವಿಲು ಗರಿಯ ಕೆದರಿ ಕುಣಿದಿದೆ
ಆ ನಿನ್ನ ಪ್ರೀತಿ ಸ್ಪರ್ಶ ಸೋಕಿದ್ಹರ್ಷದಿ
ನಾ ಕನಸಲ್ಲಿ ಕಾಣೋ ಸಹಜ ಸರಳ ಸುಂದರಿ
ನೀನೆಂದು ತಿಳಿದು ಹೃದಯಕ್ಕೀಗ ನೆಮ್ಮದಿ
ಓ ಚೆಲುವೇ ...

ಈ ಒಲವೆಂಬ ಮಧುರ ಪದ್ಯ ಸದ್ಯ ಕಾದಿದೆ
ಆ ಎರಡೆರಡು ಮನಸ ಮಧ್ಯ ಆಗೋ ಮಿಲನಕೆ
ಹೇ ಚೆಲುವಮ್ಮ ನೀನು ಚರಣವಿರದ ಕವನವೆ
ಆ ಕವನ ನಾನು ಕಣ್ಣ ತುಂಬಿಸಿಕೊಳ್ಳಲೆ
ಓ ಕನಸೇ ...


Tuesday, July 9, 2013

ಜಂಟಿಯತನ ಒಂಟಿಯತನವನ್ನು ಒಂಟೆಯ ಮೇಲೆ ಕೂರಿಸಿ ಓಡಿಸಿದಾಗ ಹುಟ್ಟಿದ ಹಾಡು


ಸರಿಗಮ ಸ್ವರದ ಮೇಲೆ
ಮನದ ಪ್ರೇಮ ಕುಣಿವ ವೇಳೆ
ಅರಿತು ಜೋಡಿಯ
ನರದ ನಾಡಿಯು
ಬರೆದ ಹಾಡಿದು
ಹಾಡುತ್ತಿರುವೆ ಕೇಳೆ ಚೆಲುವೆ

ಒಂಟಿಯತನಕೆ ವಂದನೆ ಹೇಳೋ ಸಮಯ
ಜಂಟಿಯ ಅಪ್ಪುಗೆ ಮನಕೆ ಆನಂದಮಯ
ಮುಗಿಲನು ಮುಟ್ಟಿ ಮುತ್ತನು ನೀಡುವೆ ಈಗ
ಮನದಲಿ ಮೂಡಿದೆ ಮದನನ ಮೀರಿಸೋ ವೇಗ
ಚಿನ್ನ ಎನ್ನಲಿ
ರನ್ನ ಎನ್ನಲಿ
ನಿನ್ನ ನೆನಪಲಿ
ನಿನಗೆ ಸೋತೆ... ಜಗವ ಮರೆತೆ

ಚಿಲಿಪಿಲಿ ಕೂಗೋ ಹಕ್ಕಿಯ ಒಳಗಡೆ ಸೇರಿ
ಅರಗಿಳಿ ನಿನ್ನ ಹುಡುಕುತ ಬರುವೆನು ಹಾರಿ
ಕುಹೂ ಕುಹೂ ಕೂಗೋ ಕೋಗಿಲೆ ಕೊರಳಲಿ ಸೇರಿ
ಕ್ಷಣ ಕ್ಷಣ ಕೂಗುವೆ ನಿನ್ನನೆ ಸಾವಿರ ಬಾರಿ
ದನಿಯ ಕೇಳುತ
ಸನಿಹ ಬಯಸುತ
ಇನಿಯನರಸುತ
ಒಮ್ಮೆ ಬಾರೆ.. ನನ್ನ ಸೇರೆ!!


ಸರಿಗಮ ಸ್ವರದ ಮೇಲೆ
ಮನದ ಪ್ರೇಮ ಕುಣಿವ ವೇಳೆ
ಅರಿತು ಜೋಡಿಯ
ನಾರದ ನಾಡಿಯು
ಬರೆದ ಹಾಡಿದು
ಹಾಡುತ್ತಿರುವೆ ಕೇಳೆ ಚೆಲುವೆ