Sunday, April 11, 2010

ಸ್ನೇಹದ ಸವಿಯ ಸವಿಯುತ ಸ್ನೇಹಕೆ ಸೋತ ಮನಸಿಂದ ಸುರಿದ ಹಾಡು


ಓ ಸ್ನೇಹ ಓ ಸ್ನೇಹ ನೀನಂತು ಅತಿ ಮಧುರ
ಖುಷಿಯಿಂದ ತುಂಬೋಯ್ತು ಈ ಮನಸ ಪ್ರತಿ ಚದರ
ಈ ಸಾಗರವು ಆ ಚಂದ್ರನಿಗೆ ಅಲೆಯೆಬ್ಬಿಸಿ ತಾನು ಕುಣಿಯೋದು
ಈ ಧರೆಯ ಮನವ ತಂಪಾಗಿಸೋಕೆ ಆ ಮೋಡ ತಾನು ಅಳುವುದು
ಮಾತುಗಳೇ ಇಲ್ಲದೆ ಹೂವುಗಳ ಚುಂಬಿಸೋ ದುಂಬಿ ಬಯಸೋದೆ ಸ್ನೇಹವ ಓ ಸ್ನೇಹ

ಆ ಮಾವು ಚಿಗುರಿದಾಗ ಕೋಗಿಲೆ ಹಾಡೋದು
ಮಳೆ ಹನಿಯು ತಾಕಿ ನವಿಲು ಗರಿಯ ಗೆದರೋದು
ಆ ರವಿಯ ಜೊತೆಗೆ ಸಾಗಿ ಈ ಸೂರ್ಯ ಕಾಂತಿ ಹೂ
ಮುಂಜಾನೆ ತಾನು ಅರಳಿ ಮುಸ್ಸಂಜೆ ಮುದುಡೋದು
ಇದು ಎಂತ ಸಂಬಂಧಾ.. ಹೇಳು
ಸ್ನೇಹ ನೀ ಶ್ರೀಗಂಧಕು... ಮಿಗಿಲು ಓ ಸ್ನೇಹ

ಆಗಸವ ಸಿಂಗರಿಸೋಕೆ ಚುಕ್ಕಿ ಮಿನುಗುವುದು
ಆ ಚುಕ್ಕಿ ಮಿನುಗಲೆಂದೇ ರವಿಯು ಮುಳುಗಿ ಹೋಗುವುದು
ರವಿ ಮತ್ತೆ ಬಾ ಎಂದೂ.. ಭೂ ರಮೆಯು ತಿರುಗುವುದು
ಒಂದಕೆ ಮತ್ತೊಂದು ಈ ರೀತಿ ಬದುಕುವುದು
ಇಂಥ ಸ್ನೇಹ ಸಿಕ್ಕವರೇ.. ಧನ್ಯ
ಸ್ನೇಹ ನೀ ಇಲ್ಲದಿರೆ... ಈ ಜಗ ಶೂನ್ಯ ಓ ಸ್ನೇಹ