Wednesday, December 28, 2011

ಪ್ರೀತಿಯ ಪರ್ವದಿ ಪ್ರೀತಿಯ ಪರಿಯು ಪಸರಿಸಿದ ಹಾಡು

ಪರಿ ಚಿತ್ರದ "ಆಷಾಡ ಕಳೆದೈತೆ" ಹಾಡಿನ ರಾಗದಲ್ಲಿ


ಭಾನಿನ ಕಿರಣವು ಭೂಮಿಯ ತಾಗೈತೆ
ರೋಮವು ಮೈಯಲಿ ರೊಯ್ಯನೆ ನಿಂತೈತೆ ೨

ಮಾಘದ ಮಾಸದ ಮುಂಜಾನೆ ಹೊತ್ತಲಿ
ಮಾಗದ ಮನಸಲಿ ಮಲ್ಲಿಗೆ ಜೋಕಾಲಿ
ತೂಗೈತೆ ಅತ್ತಿತ್ತ ಪರಿಮಳ ಚೆಲ್ಲುತ್ತ
ಪ್ರೀತಿಯು ತಂದಿತ್ತ ಸೊಬಗನು ಸವಿಯುತ

ಮಾಘದ ಮಾಸದ ಮುಂಜಾನೆ ಹೊತ್ತಲಿ
ಮಾಗದ ಮನಸಲಿ ಮಲ್ಲಿಗೆ ಜೋಕಾಲಿ

ನಿದ್ದೆ ಇಲ್ಲ.. ಎದ್ದರೆ ಸದ್ದೇ ಇಲ್ಲ
ಪ್ರೀತಿಯೇ ನಿನ್ನ ನೆನಪು.. ನೆನೆಯದೆ ಇರುಳೆ ಸಾಗೊಲ್ಲ
ಕರೆದೋನಲ್ಲ ನಿನ್ನನು ಕಂಡೋನಲ್ಲ
ಕ್ಷಣದಲಿ ಕಳೆದೋಯ್ತಲ್ಲ ಹೃದಯವು ನೀನೆ ಆ ಕಳ್ಳ
ಕಣ್ಣನು ಮುಚ್ಚಿ ನಿನ್ನನು ಮೆಚ್ಚಿ ಜಗವನೆ ಮರೆತೆ ನಾನಿನ್ನು
ಗುರಿಯನು ತಪ್ಪಿ ಗಾಳಿಯ ಅಪ್ಪಿ ಮುದ್ದಾಡು ಮನಸೇ ನೀನಿನ್ನು

ಬಾನಿಗೆ ಏಣಿಯ ಹಾಕುವ ಹುಮ್ಮಸ್ಸು
ಬಾಳಲಿ ರಾಣಿಯ ಅಪ್ಪುವ ಮನಸು

ಕರಣದಿ ಕೇಳಿದೆ ಕವನವ
ಕೊರಳಲಿ ರಾಗವ ಗುನುಗುತ ಖುಷಿಯಲಿ ತೇಲುವ
ಮೋಡವ ಬದಿಗೆ ದೂಡುವ
ತಿಂಗಳ ಅಂಗಳದಲಿ ಪ್ರೀತಿಯ ರಂಗನ್ನು ಚೆಲ್ಲುವ
ಅಳಿಲ ಹಿಡಿದು ಬೆನ್ನನು ಮುಟ್ಟಿ ಅದೃಷ್ಟವಂತ ನಾನಾದೆ
ಪ್ರೀತಿಯ ಮಡಿಲ ಸೇರಿ ನಾನು ಥಟ್ ಅಂತ ಕಳೆದೋದೆ

ಹರೆಯದ ಹುಡುಗ ನಾನ್ ಅರಳಿದೆ ಒಂದಾಸೆ
ಅರಸಿಯ ಅರಸುವೆ ಜೊತೆಯಿರು ಓ ಮನಸೇ

Sunday, December 11, 2011

ಸಣ್ಣನೆ ಹೆಣ್ಣ ತಣ್ಣನೆ ಪ್ರೀತಿ ಕಣ್ಣನು ಕಟ್ಟಿ ಮಣ್ಣನು ಮುಕ್ಕಿಸಿದಾಗ...

ಹಟವಾದಿ ಚಿತ್ರದ "ಆಟ ಹುಡುಗಾಟವೋ" ಹಾಡಿನ ರಾಗದಲ್ಲಿ...

ಪ್ರೀತಿ ನೀ ಮಾಯೆಯೋ
ಹೆಣ್ಣೇ ನೀ ಮೊಸವೋ
ಪ್ರೀತಿ ನೀ ಮಾಯೆಯೋ
ಹೆಣ್ಣೇ ನೀ ಮೊಸವೋ
ಮೊಸವೋ ಪಾಶವೋ
ಈ ಜೀವ ನಾಶವೋ
ಹಕ್ಕಿಯ ಪಟ್ಟ ಕೊಟ್ಟೆ
ರೆಕ್ಕೆಯ ಕಟ್ಟಿ ಬಿಟ್ಟೆ
ಹೂವಿನ ಹಾಸಿಗೇಲಿ
ಕತ್ತಿಯ ಇತ್ತು ಬಿಟ್ಟೆ
ನೀ ಕ್ರೂರಿಯಾ
ಯಮನ ರಾಯಭಾರಿಯಾ

ಹೃದಯ ಈ ಹೃದಯ ನಿನಗೆಂದೆ ನಾನು
ನನ್ನ ಈ ಎದೆಯ ಒಡಲಲ್ಲಿ ನೀನು
ಕಿಚ್ಚ್ಯಾಕಿಟ್ಟೆ...
ಬಾರಿ ಬಲು ಬಾರಿ ಈ ಮನಸು ಜಾರಿ
ನಿನ್ನ ಆ ಮಾನವ ಮುಗಿಲಲ್ಲಿ ಹಾರಿ
ಆಯ್ತು ಚಿಟ್ಟೆ...
ಕಾರಣವೇ ಹೇಳದೇನೆ ಕಣ್ಣುಗಳ ಕಟ್ಟು ಬಿಟ್ಟೆ
ಕರೆದರೂನು ಕೇಳದೇನೆ ಕಾಣದೂರಿಗೋಗಿಬಿಟ್ಟೆ
ಕರುಣೆ ಇಲ್ಲವೇನೆ ನಿನಗೆ.... ಹೇ ಹೇ

ಸಾಕು ಇನ್ನು ಸಾಕು ಈ ಸುಳ್ಳು ಸಾಕು
ಹಾಕು ಇನ್ನು ಹಾಕು ನೀ ಹೊರಗೆ ಹಾಕು
ಸಿಹಿಯ ವಿಷವ..
ಕ್ಷಣವು ಕ್ಷಣ ಕ್ಷಣವು ನೀ ಕೊಟ್ಟ ಪ್ರೀತಿ
ಕಣವು ಕಣ ಕಣವು ತುಂಬಿದ ರೀತಿ
ಈಗ ಭೀತಿ
ಮೀನ ಹೆಜ್ಜೆಯನ್ನು ಕೂಡ ನೀರಿನಲ್ಲಿ ನಾ ಕಂಡೆ
ನಿನ್ನ ಮನವ ಕಾಣಲಿಲ್ಲ ಹೇಳು ನೀನು ನಾ ಕುರುಡೇ
ನಗುವೇ ಏಕೆ ನನ್ನ ನೋಡಿ... ಹೇ ಹೇ..

Wednesday, November 23, 2011

ಏನಾಗಲಿ ನಾನು ಎಂದುಕೊಳಲು ಎಲ್ಲಿಂದಲೋ ಬಂದ ಹಾಡು


ಕವಿಯಾಗಲೇನು
ಬಣ್ಣವನು ಬಣ್ಣಿಸಲು
ಮಗುವಾಗಲೇನು
ಮಡಿಲಿನಲಿ ಪವಡಿಸಲು
ನದಿಯಾಗಲೇನು
ಕಣ್ಣಲ್ಲಿ ನೀರಾಗಲು
ರವಿಯಾಗಲೇನು
ಹಣೆಯಲ್ಲಿ ರಾರಾಜಿಸಲು
ಎನಾಗಲೇಳು ನಾನು
ನಿನ ಸಂಗ ಬಿಡದಿರಲು

ಗುಳಿಯಾಗಲೇನು
ಕೆನ್ನೆಯಲಿ ಸುಳಿದಾಡಲು
ಮಿಂಚಾಗಲೇನು
ತುಟಿಯಲ್ಲಿ ನಲಿದಾಡಲು
ಅಪರಂಜಿಯಾಗಲೇನು
ಕೊರಳಲ್ಲಿ ಸರವಾಗಲು
ಮುತ್ತು ನಾನಾಗಲೇನು
ಮೂಗನ್ನು ಸಿಂಗರಿಸಲು
ಎನಾಗಲೇಳು ನಾನು
ಜೊತೆಯಲ್ಲೇ ಜೀವಿಸಲು

ಗಾಳಿ ನಾ ಆಗಲೇನು
ಉಸಿರಲ್ಲಿ ಉಸಿರಾಗಿರಲು
ನಾ ಗಾಜು ಆಗಲೇನು
ಬಳೆಯಂತೆ ನಿನ ಬಳಸಿರಲು
ಕನ್ನಡಿಯಾಗಲೇನು
ನಿನ ರೂಪ ತುಂಬಿಕೊಳಲು
ಜೇನಾಗಲೇನು
ಅದರದಲಿ ಅವಿತುಕೊಳಲು
ವರನಾಗಲೇ ನಾನು
ನಿನ ಬಾಳ ವರಿಸಿರಲು

Monday, November 21, 2011

ಕನಸೆಂಬೋ ಕುದುರೆಯಲಿ ಕಣ್ಣು ಕಾಣದ ಕನಸಿನ ಹಾಡು

ಸವಾರಿ ಚಿತ್ರದ "ಮರಳಿ ಮರೆಯಾಗಿ" ಹಾಡಿನ ರಾಗದಲ್ಲಿ...


ಬಾನ ತುದಿಯಲ್ಲಿ.. ಕಂಡೆ ಹೊಂಗಿರಣ
ಭಾನ ಆಗಮನ ಜೊತೆಗೆ.. ಮುಗಿದ.. ಕನಸಿನ ಪಯಣ..
ಬಾನ ತುದಿಯಲ್ಲಿ.. ಕಂಡೆ ಹೊಂಗಿರಣ
ಭಾನ ಆಗಮನ ಜೊತೆಗೆ.. ಮುಗಿದ.. ಕನಸಿನ ಪಯಣ
ಮೋಡದ ಮೇಲಾಡುವ
ತಿಂಗಳ ತಬ್ಬೋಡುವ
ಆ ಕನಸೇ.. ಮನಸಿನ ತಲ್ಲಣ

ಹಕ್ಕಿಯ ರೆಕ್ಕೆಯ ಪುಕ್ಕ ಕಿವಿ ಸೋಕಲು
ಕಂಡೆ ನಾ ಕನಸಲೆ ಶಶಿಯ ನಗೆ ಹೊನಲು
ರೆಪ್ಪೆಯನು ತೆರೆ ಬಿಡಲು
ಕಣ್ಣಲ್ಲಿ ಕರಿ ನೆರಳು
ಅವಳೇ ನನ್ನವಳು
ಈ ಬಾಳ ಹೊಂಬಿಸಿಲು
ಈ ಕನಸ.. ಪರಿಯನು ಅರಿಯೆನು

ಶಯನದಿ ಅರಳಿದ ಸೆರಗಲಿ ಹೊರಳುತ
ಬೆಚ್ಚನೆ ಅಪ್ಪುಗೆ ತೋಳಲಿ ಬಳಸುತ
ಸ್ವರ್ಗವನೇ ಅಂಗೈಲಿ
ಸೇರೆದಿಡುವ ಆ ಸ್ವಪ್ನದಲಿ
ಪರದೆ ಸರಿದಾಗ
ಅರಿವಾಯ್ತು ನನಗಾಗ
ನಾ ಕಂಡೆ.. ಕನಸಲಿ ಕನಸನು

Monday, April 18, 2011

ಭಾವನೆಗಳ ಭಾರದಿಂದ ಬರಿದಾದ ಭಾವವೇ ಬರೆದ ಹಾಡು


ಹಿಂದಿಯ ಇಷ್ಕಿಯ ಚಿತ್ರದ ದಿಲ್ ತೋ ಬಚ್ಚಾ ಹೇ ಜಿ ಹಾಡಿನ ರಾಗದಲ್ಲಿ


ಇಂದು ಈ ನನ್ನ ಮನಸೇಕೋ ಮಂಕಾಗೊಯ್ತು
ಕಾರಣವ ಕೇಳೋ ಆ ಮನಸು ಎಲ್ಲೋರಟೋಯ್ತು
ತಂಪು ತಂಗಾಳಿಯು ಕೂಡ ಬಿಸಿಯಾಗೋಯ್ತು
ಅದ ಉಸಿರಾಡಿ ಈ ಎದೆಯೇ ಸುಟ್ಟೇ ಹೋಯ್ತು
ಮುಸ್ಸಂಜೆ ಮಳೆಯು ತಂಪಾಗಿಸಲಿಲ್ಲ
ಆ ಮಿಂಚು ಗುಡುಗು ಬಡಿದೋಡಿಸಲಿಲ್ಲ
ಈ ಹೃದಯ ಕಣ್ಣಿಗೆ ಕಾಣುವುದ್ಹಗುರ
ಆದರೆ ಭಾವನೆಗಳು ಭಾರ
ಅದರ ಭಾವನೆ ಭಾರ
ತಡೆದು ಕೊಳ್ಳೋನ್ಯಾರ
ಆ... ಅದರ ಭಾವನೆಗಳು ಭಾರ ಇಂದು


ನನ್ನಷ್ಟಕ್ ನಾನು ಹೂವಾಗಿ ಇದ್ದೆ... ನನಗರಿಯದೆ ನೀ ಸೆಳೆದೆ ದುಂಬಿ
ನೀನಿಷ್ಟ ಪಟ್ಟ ಕನಸಿನ ಪಟ್ಟ... ನಿನ ಆಳುತಿದೆ ನಿನ್ನೊಳಗೇ ತುಂಬಿ
ಮನಸೇ ನಿಲ್ಲು ನೀನು... ನಿನ್ನನೆ ಕೊಲ್ಲು ನೀನು
ಅಳುವುದ ಕಲಿತೆ ನೀನು... ನಗುವನೆ ಮರೆತೆ ನೀನು
ನಿನ್ನೊಲವಿನ ಆಳ... ಅರಿಯೋದು ಹೇಗೋ..
ಕಂಡೋರು ಯಾರೋ... ಕೇಳ್ದೋರು ಯಾರೋ
ನಿನ್ನೊಳಗಿನ ಒಗಟ ಬಿಡಿಸೋರು ಯಾರೋ
ಹೇ ಹೃದಯ ನೀನಿಂದು ಕಲ್ಲಾಗಿ ಹೋಗು...
ನಿನ್ನ ಭಾವನೆಗಳು ಭಾರ
ನಿನ ಭಾವನೆ ಬಲು ಭಾರ
ತಡೆದು ಕೊಳ್ಳೋನ್ಯಾರ
ಆ.. ಭಾವನೆಗಳು ಭಾರ


ಇರುಳಲ್ಲಿ ಇತ್ತು ಕಣ್ತುಂಬ ನಿದ್ದೆ... ಇಂದೇಕೋ ಕಣ್ಣೆಲ್ಲ ಒದ್ದೆ
ನಾ ಗೆದ್ದೆ ಎಂದು ನಲಿಯುತ ಇದ್ದೆ.. ಈಗ ಹಗಲಲ್ಲೇ ನೀ ಜಾರಿ ಬಿದ್ದೆ
ಮನಸೆ ಗೆಲ್ಲು ನೀನು... ಹಂತಕನೆ ಕೊಲ್ಲು ನೀನು
ಬಿದ್ದರು ನಿಲ್ಲು ನೀನು... ಯೋಚಿಸಿ ಹೇಳು ನೀನು
ಮನಸನ್ನೇ ಗೆಲ್ಲೋ... ಕನಸಿಲ್ಲ ಎಲ್ಲೂ
ಆ ಮೋಡ ಕರಗಿ ಮಳೆಯಾದರೇನು
ಮತ್ತೊಮ್ಮೆ ಹುಟ್ಟಿ ಬರಲಿಲ್ಲವೇನು
ಹೇ ಹೃದಯ ಒಳಗಣ್ಣು ನೀ ತೆರೆದು ನೋಡು
ನಿನ್ನ ನಿಜವಾದ ಭಾರ
ನಿನ್ನ ನಿಜವಾದ ಭಾರ
ನಿನ ಮುಂದೆ ಎಲ್ಲವು ಹಗುರ
ಅದೇ ನಿನ್ನ ನಿಜ ಭಾರ