Friday, November 2, 2012

ಕನ್ನಡ ರಾಜ್ಯೋತ್ಸವದ ಹಾಡು


ಕುಹೂ ಕುಹೂ ಕೂಗುವ ಕೋಗಿಲೆ ದನಿಯಲು ಕೇಳಿದೆ ನನ್ನ ಕನ್ನಡ
ಸರಿಗಮ ಸೂಸುವ ವೀಣೆಯ ನಾದದಿ ಹೊಮ್ಮಿದೆ ನನ್ನ ಕನ್ನಡ
ಉಸಿರಾಡುವ ಗಾಳಿಯ ಕಣ ಕಣದಲ್ಲೂ ಕಂಪನು ಬೀಸಿದೆ ಕನ್ನಡ
ಮಗುವಿನ ತೊದಲ ಮಾತಲು ನುಲಿದಿದೆ ನನ್ನೀ ಭಾಷೆಯು ಕನ್ನಡ

ನೇಗಿಲ ಯೋಗಿಯು ಬಿತ್ತಿದ ಭತ್ತದ ತೆನೆ ತೆನೆಯಲ್ಲೂ ಕನ್ನಡ
ಈ ಮಣ್ಣಿನ ಮಗನ ಮೈಯಲಿ ಹರಿಯುವ ಪ್ರತಿ ಹನಿ ನೆತ್ತರು ಕನ್ನಡ
ಮುಂಜಾನೆಯ ಹೊತ್ತಲಿ ಹಕ್ಕಿಯ ಚಿಲಿಪಿಲಿ ಮಾತಲು ನುಲಿದಿದೆ ಕನ್ನಡ
ಏಳು ಬಣ್ಣದ ಕಾಮನ ಬಿಲ್ಲಿನ ಪ್ರಜ್ವಲ ಬೆಳಕಲು ಕನ್ನಡ

ಕವಿ ಕೊಟಿಯು ರಚಿಸೋ ಕವನವ ಕಂಡರೆ ಪ್ರತಿ ಪದದಲ್ಲೂ ಕನ್ನಡ
ಸಂಗೀತ ಋಷಿಗಳು ಹಾಡುವ ಪ್ರತಿ ಹಾಡಿನ ಸ್ವರದಲು ಕನ್ನಡ
ಮೈ ತುಂಬಿ ಹರಿಯುವ ಕಾವೇರಿ ತಾಯಿಯ ಜುಳು ಜುಳು ನಾದವು ಕನ್ನಡ
ತಂಪಾದ ಗಾಳಿಗೆ ತಲೆಯನು ತೂಗೋ ಹಸಿರೆಲೆ ಬೀಸಿದೆ ಕನ್ನಡ

ಈ ಕರುನಾಡಿನ ಕೆಚ್ಚೆದೆ ಗಂಡಿನ ಹೃದಯವ ಬಗೆದರು ಕನ್ನಡ
ಈ ನೆಲದಲ್ಲಿ ಹುಟ್ಟಿದ ಮನುಜನು ತೋರುವ ಪ್ರೀತಿಲು ಕನ್ನಡ
ಕಲ್ಲಿನ ಕೋಳಿ ಕೂಗಿದರು ಕೂಡ ಕೇಳುವುದೊಂದೇ ಕನ್ನಡ
ಪ್ರಳಯವೇ ಆದರು ಉಳಿಯಲೇಬೇಕು ಮಾತನು ಕೊಟ್ಟ ಕನ್ನಡ!!

Sunday, October 21, 2012

ಇಡ್ಲಾ ಮಾಡ್ಲಾ ಹಾಡ್ ಬರೀಲಾ ಅಂದಾಗ ಬಂದ ಹಾಡು


ಡ್ರಾಮ ಚಿತ್ರದ "ಚೆಂದುಟಿಯ ಪಕ್ಕದಲ್ಲಿ" ಹಾಡಿನ ರಾಗದಲ್ಲಿ!


ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?
ಹಾರಾಡೋ ಹಕ್ಕಿಗಳ ರೆಕ್ಕೆಗಳ ಕಟ್ಟಿಟ್ಟು ನಿನ ಜೊತೆ ಆಗಸದಿ ತೇಲಾಡ್ಲಾ?
ಕಣ್ ಮುಚ್ಚಿ ನಿನ ನೆನೆದ ನೆನಪಿಂದ
ನಾ ಬರೆದ ನಾನಿರುವ ಕನಸೊಂದ
ನಿನ ಕಣ್ಣ ಕೊನೆಯಲ್ಲಿ ಬಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ತಂಪಾದ ಈ ಹೊತ್ತು ತಂಗಾಳಿ ಬೀಸುತಿದೆ ಹಿಡಿದಿಡಿದು ನಿನ ಉಸಿರ ಜೊತೆಯಲ್ಲಿ ಬೆರೆಸ್ಲಾ?
ರೇಶಿಮೆಯ ಚೆಲುವನ್ನು ಎಣೆದೆಣೆದು ನಾ ತಂದು ನಿನ ಸೀರೆ ಸೆರಗಲ್ಲಿ ಚಿಟ್ಟೆಯಾಗ್ ಇಡ್ಲಾ?
ನನ್ನೆದೆಯ ಗೂಡಲ್ಲಿ ಗುಡಿಯೊಂದು
ಕಟ್ಟಿರುವೆ ನಿನ್ನನ್ನೇ ನೆನೆ ನೆನೆದು
ನಿನ ಚಿತ್ರವ ಅಲ್ಲಿ ಕೆತ್ತಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಹೂದೋಟ ಅಲ್ಲಿಹುದು ಹೂವೆಲ್ಲ ಅರಳಿಹುದು ಪ್ರತಿಯೊಂದು ಹೂವಲ್ಲು ನಾ ಕಂಡೆ ನಿನ್ನ
ಇರುಳಲ್ಲು ಕಂಡಿಹುದು ನಿನ್ನಲ್ಲಿಗೆ ದಾರಿ ಕಣ್ಮುಚ್ಚಿ ಬಂದಿರುವೆ ಬರಮಾಡೆ ನನ್ನ
ಬೆಟ್ಟದ ಮೇಲಿರುವ ಸಿಹಿ ಜೇನ
ನಿನಗಾಗಿ ನಾನೀಗ ತರಲೇನ?
ನಿನ ತುಟಿಯಲಿ ಅದನು ಮುಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಆ ಮೋಡದಂಚಿಂದ ಮೈ ಮರೆತು ಜಾರಿದ ಮೊದ ಮೊದಲ ಮಳೆ ಹನಿಯು ನೀನೇನಾ ಚೆಲುವೆ?
ಮಳೆ ಹನಿಯು ತಾಗುತಲಿ ಮನ ಬಿಚ್ಚಿ ಹಾಡುವ ಕೋಗಿಲೆಯ ದನಿಯನ್ನು ಕೈ ಮುಚ್ಚಿ ತಡೆವೆ
ಹಾಡೊಂದ ನಾನೀಗ ಬರೆದಿರುವೆ
ಪ್ರತಿ ಪದದಿ ನಿನ್ಹೆಸರೆ ತುಂಬಿರುವೆ
ನಿನ ಮುಂದೆ ಅದನೀಗ ನಾ ಹಾಡ್ಲಾ ?

Thursday, October 18, 2012

ಕೊಟ್ರೆ, ಕೊಡಬೇಕು.. ಕೊಟ್ರೆ ಕೊಡಿಸ್ಕೊಳ್ಳಲು ಬೇಕು..

ಡ್ರಾಮ ಚಿತ್ರದ "ಬೊಂಬೆ ಆಡ್ಸೋನು" ಹಾಡಿನ ರಾಗದಲ್ಲಿ...



ಡೈಲಾಗ್:   ಅವಳು ಸ್ಮೈಲ್ ಕೊಡ್ತಾಳೆ.. ಕೊಡಬೇಕು
                ಲವ್ ಯು ಅಂತಾಳೆ.. ಯು ಟೂ ಅನ್ಬೇಕು
                ಕೈ ಕೊಡ್ತಾಳೆ... ಕೊಡಿಸ್ಕೋ ಬೇಕು ಹ ಹ ಹ ಹ


ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?
ಪ್ರಳಯ ಅನ್ನೋದು ಆದ್ರು ಆಗ್ಬೋದು
ಹಳೆಯ ಡವ್ವು ಮತ್ತೆ ಸಿಗದು
ಒಂದನೇ ಕ್ಲಾಸಲಿ ಅಳಸಿ ಅಳಸಿ ಅ ಆ ಬರೆದಂತೆ
ಹಿಂದು ಮುಂದು ನೋಡದೆ ಬ್ರಹ್ಮ ವಿಧಿಯ ಬರೆದ್ನಂತೆ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಕಾಲರು ಎತ್ತು ಕೊಂಡು
ಕಲ್ಲರು ಹುಡುಗಿಗೆ
ಫ್ಲವರ್ ಕೊಟ್ಟಾಯ್ತು
ಪವರ್ ಬಂದಾಯ್ತು
ಮೈಲಿಯ ದೂರದಿ
ಸ್ಮೈಲನು ಕೊಟ್ಟಳು
ಮೈ ಎಲ್ಲ ಜುಮ್ಮಂತು
ಡೈಲಿ ರೂಟೀನ್ ಆಯ್ತು
ಹೂ ಖಾಲಿ ಆದಮೇಲೆ ಟೈಮ್ ಪಾಸು ಲವ್ವು ಅನ್ನೋದೇ
ಈ ನನ್ನ ಹಾರ್ಟಿನಲ್ಲಿ ಕಳ್ಳಿ ಗಿಡ ಊಣೋದೇ
ರಾಕೆಟ್ಟು ಬಿಟ್ಟು ಚಂದ್ರ ಲೋಕಕ್ಕೂಗ್ಬೋದು
ನಮ್ ಪಾಕೆಟ್ಟು ಖಾಲಿ ಇದ್ರೆ ಪ್ರೀತಿ ಸಿಗದು

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಮನಸೊಂದು ಇದ್ದರೆ
ಮಾರ್ಗಾನು ಐತಂತೆ
ಆ ಮನಸೇ ಕಳೆದೊದ್ರೆ
ಸ್ವರ್ಗಾನು ನರಕದಂತೆ
ಈ ಹಾಳು ಹೃದಯಕ್ಕೆ
ಬೇಕಿತ್ತಾ ಮೊಹಬತ್ತು
ಬೂದಿನ ಮುಚ್ಚಿರೋ
ಕೆಂಡದಂತ ಆಪತ್ತು
ಸೆರಗಲ್ಲಿ ಕೆಂಡ ಕಟ್ಕೊಂಡು ತಣ್ಣಗಿರೋಕಾಯ್ತದ
ಹಾರ್ಟಲ್ಲಿ ಹುಡುಗಿ ಇಟ್ಕೊಂಡು ಕಣ್ಣೀರ್ ಹಾಕದಿದ್ರಾಯ್ತದ
ಆಟಮ್ಮು ಬಾಂಬು ಬಿದ್ರೆ ದೇಶ ಹೋಯ್ತದೆ
ಪ್ರೀತಿಲಿ ಚೊಂಬು ಸಿಕ್ರೆ ಜಗವೇ ಸಾಯ್ತದೆ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು
ಒಂಟಿ ಹುಡುಗಿನ ಹ್ಯಾಗೆ ನಂಬೋದು?
ಪ್ರಳಯ ಅನ್ನೋದು ಆದ್ರು ಆಗ್ಬೋದು
ಹಳೆಯ ಡವ್ವು ಮತ್ತೆ ಸಿಗದು
ಒಂದನೇ ಕ್ಲಾಸಲಿ ಅಳಸಿ ಅಳಸಿ ಅ ಆ ಬರೆದಂತೆ
ಹಿಂದು ಮುಂದು ನೋಡದೆ ಬ್ರಹ್ಮ ವಿಧಿಯ ಬರೆದ್ನಂತೆ

Friday, September 28, 2012

ಕುಹೂ ಕುಹೂ ಕೋಗಿಲೆ ಕೂಗಿದಾಗ ಕೈ ಗೀಚಿದ ಹಾಡು


ಕುಹೂ ಕುಹೂ ಕೋಗಿಲೆ ಕೂಡ
ಉಹೂ ಉಹೂ ಅಂತಿದೆ ನೋಡ
ನಿನ್ನಯ ದನಿಯನು ಕೇಳಿ
ತಾ ಹಾಡಲು

ಮಿರ ಮಿರ ಮಿರುಗುವ ಚಿನ್ನ
ಮರುಗಿದೆ ನೋಡುತ ನಿನ್ನ
ಸೊರಗಿದೆ ಅದರದೇ ಬಣ್ಣ
ಎದುರು ನೀನಿರಲು

ಫಳ ಫಳ ಹೊಳೆಯುವ ಚುಕ್ಕಿ
ಅಳುತಿದೆ ನೋವಿಗೆ ಸಿಲುಕಿ
ಹೊಳೆಯುವ ನಿನ್ನಯ ನಗೆಯ
ಮಿಂಚು ಸೋಕಲು

ಸುಡು ಸುಡು ಸುಡುತಿರೋ ಸೂರ್ಯ
ಅಡಗಿದ ಎಲ್ಲೋ ನೋಡೆಯ
ನಿನ್ನಯ ಕಾಂತಿಯ ಕಿರಣ
ಅವನ ಇರಿಯಲು

Tuesday, August 14, 2012

ಸ್ವಾತಂತ್ರ್ಯ ದಿನದ ಸಲುವಾಗಿ ಸುರಿದ ಹಾಡು



ನನ್ನ ದೇಶವು
ಭಾರತ ದೇಶವು
ನನ್ನ ದೇಶವು
ಪುಣ್ಯ ಭೂಮಿ
ಭಾರತೀಯನ ಮಾತೃ ಭೂಮಿ
ಖಂಡ ಖಂಡಗಳ ಕಂಡರೂ ಸಿಗದು
ಮಣ್ಣ ಮುಟ್ಟಿದರೆ ಪಾಪವು ಕಳೆವುದು
ಭಾರತಿಯೇ.. ನಿನ ಕೀರುತಿಯ..
ಸಾರುವುದೇ.. ನಿಂಗೆ ಆರತಿಯು..

ನನ್ನ ದೇಶವು
ಪುಣ್ಯ ಭೂಮಿ
ಭಾರತೀಯನ ಮಾತೃ ಭೂಮಿ

ಶಾಂತಿ ಧಾಮ ನಿನ ಮಡಿಲು
ಕೆಣಕಿದರೆ ನೀ ಬರ ಸಿಡಿಲು
ಕೋಟಿ ಕೋಟಿ ದೈವಾನುಭೂತಿಯೇ
ಭಾರತ ಮಾತೆಯ ವಿಭೂತಿಯು
ಶಾಂತಿ ದೂತ ಮಹಾತ್ಮರು
ಸಿಂಹ ಬಲದ ಕ್ರಾಂತಿ ವೀರರು
ನಿನ್ನ ರಕ್ಷಣೆಗೆ ನಿಂತಿಹರು
ಶತ್ರು ಯಾರಿರಲಿ ಸೋಲುವರು
ಹಿಮಾಲಯ ಬಿಳಿಯಾಗಿ
ತೋರಿದೆ ನಿನ್ನಯ ತಿಳಿ ಮನಸ
ಜ್ಞಾನದ ಸಂಪತ್ತು
ಹೇಳಿದೆ ನಿನ್ನಯ ಇತಿಹಾಸ
ಸ್ವರ್ಗವೇ ಇಲ್ಲಿದೆ
ಕೈ ಅನು ಮುಗಿದು ಬಾ
ಎಲ್ಲಿಯೂ ಕಾಣದ
ದೈವವ ನೋಡು ಬಾ
ಭಾರತ ಮಡಿಲಲಿ


ಭಾರತ ದೇಶವು
ಪುಣ್ಯ ಭೂಮಿ

ಹಿಂದೂ ಮುಸ್ಲಿಮ ಎರಡಲ್ಲ
ಬೌಧ ಜೈನ ಕ್ರಿಸ್ತ ಬೇಧವಿಲ್ಲ
ನಿನ್ನಯ ಮಕ್ಕಳು ನಾವೆಲ್ಲಾ
ಭಾರತೀಯರೇ ಇಲ್ಲೆಲ್ಲಾ
ಸಂಪ್ರದಾಯದ ಸಂಸ್ಕೃತಿಯು
ಕಾಣರು ಯಾರು ಮತ್ತೆಲ್ಲಿಯು
ವಿಜ್ಞಾನ ಗಣಿತ ಜ್ಞಾನದಲಿ
ನಿನಗೆ ನೀನೆ ಸರಿಸಾಟಿಯು
ಕಾಶ್ಮೀರವೇ ಕಿರೀಟವು
ಕನ್ಯಾಕುಮಾರಿ ಕಾಲುಂಗುರ
ಈ ಗಾಳಿ ನೀರು ಇರೋ ತನಕ
ನಿನ್ನಯ ಚರಿತ್ರೆಯು ಅಮರ
ಸತ್ತರೂ ಇಲ್ಲಿಯೇ
ಹುಟ್ಟುವ ಹಂಬಲ
ಹುಟ್ಟಿದ ಕೂಡಲೇ
ಮಣ್ಣನು ಮೂಸುತ
ನಗುವೆನು ನಲಿಯುತ

ನನ್ನ ದೇಶವು
ಭಾರತ ದೇಶವು
ನನ್ನ ದೇಶವು
ಪುಣ್ಯ ಭೂಮಿ
ಭಾರತೀಯನ ಮಾತೃ ಭೂಮಿ
ಖಂಡ ಖಂಡಗಳ ಕಂಡರೂ ಸಿಗದು
ಮಣ್ಣ ಮುಟ್ಟಿದರೆ ಪಾಪವು ಕಳೆವುದು
ಭಾರತಿಯೇ.. ನಿನ ಕೀರುತಿಯ..
ಸಾರುವುದೇ.. ನಿಂಗೆ ಆರತಿಯು..

Thursday, July 26, 2012

ಒಂದರಿಂದ ಹತ್ತು ಹೀಗೂ ಇತ್ತು!

ಒಂದು ನನ್ನ ಹೃದಯದಲ್ಲಿ
ಎರಡು ಅಕ್ಷರ ಪ್ರೀತಿ ಹುಟ್ಟಿ
ಮೂರು ಕ್ಷಣದಲಿ ಮನಸ ತುಂಬಿ
 ನಾಲ್ಕು ಕಡೆಯಲು ಹರಡಿದೆ
 
ಐದು ನಿನ್ನ ಬೆರಳು ತಾಕಿ
ಆರು ದಳದ ಹೂವು ಅರಳಿ
ಏಳು ಸಾಗರ ದಾಟಿ ಸುಮವು
ಎಂಟು ದಿಕ್ಕಲು ಪಸರಿದೆ
 
ಒಂಭತ್ತಿರುವ ರಸಗಳೆಲ್ಲವು
ಹತ್ತೂರ ಸುತ್ತ ಮುತ್ತ
ಸುಳಿಯಲಾರದೆ ಕಳೆದು ಹೋಗಿವೆ
ನಿನ್ನ ಮೊಗದ ಕಾಂತಿಗೆ

Thursday, July 19, 2012

ಕನಸು ನನಸುಗಳ ನಡುವೆ ಮನಸಲ್ಲಿ ಮೂಡಿದ ಹಾಡು

ಜೋಗಯ್ಯ ಚಿತ್ರದ "ಯಾರು ಕಾಣದೂರು" ಹಾಡಿನ ರಾಗದಲ್ಲಿ



ಗಂ: ನೀಲಿ ಬಾನಿನಲ್ಲಿ
ಏಳು ರಂಗು ಚೆಲ್ಲಿ
ಬರೆದೆ ನಾನು ನಿನ್ನ ಹೆಸರ

ಆಕಾಶದೂರಲ್ಲಿ
ಬಿಳಿ ಮೋಡದ ಮರೆಯಲ್ಲಿ
ಮಳೆ ಹನಿಯ ಅಂಚಿನಲ್ಲಿ ನಿನ್ನ
ಬಣ್ಣ ಕಂಡು ರೋಮಾಂಚನ
ಹೆ: ನಾ.. ಕಾಮನಬಿಲ್ಲು
ಇದ್ದರೂ ಇರದ ಸುಳ್ಳು
ನಾನು ಒಂದು ಬರಿಯ ಕನಸು
ಸಿಗದೇ ಹೋದರೆ ಯಾಕೋ ಮುನಿಸು?

ಭ್ರಮೆಯ ಬಾನಿನಲ್ಲಿ
ಭ್ರಮರೆ ನಾನು ಇಲ್ಲಿ
ಅಲ್ಲೂ ಇಲ್ಲ ಇಲ್ಲೂ ಇಲ್ಲ

ಗಂ: ನಕ್ಷತ್ರ ಸಾಲಿನಲಿ
ನಿನ ಮೊಗದ ಮಂದಾರ
ಮಿಂಚಾಗಿ ಬಂದು ನನ್ನ ಸೋಕಿ
ಕುಣಿದಿದೆ ಈ ತನ್ಮನ
ಹೆ: ಆ ದೇವರಾಣೆ
ನಿರ್ಜೀವಿ ನಾನು ಸೊನ್ನೆ
ಗಂ: ನಿಲ್ಲು ನನ್ನ ಪ್ರೀತಿ ಎರೆವೆ
ಸಂಜೀವಿನಿ ತಂದು ಜೀವ ಕೊಡುವೆ

ನನ್ನ ಹೃದಯದಲ್ಲಿ
ನಿನ್ನ ಚಿತ್ರವಲ್ಲಿ
ಅಳಿಸಬೇಡ ಚಿತ್ತ ಚೋರಿ


Tuesday, June 19, 2012

ನಲ್ಲೆಯ ನೆನಪಲಿ ನಲಿದಾಗ ನುಲಿದ ಹಾಡು

ಪರಮಾತ್ಮ ಚಿತ್ರದ "ಹೆಸರು ಪೂರ್ತಿ ಹೇಳದೆ" ಹಾಡಿನ ರಾಗದಲ್ಲಿ


ನಲ್ಲೆ ನಿನ್ನಾ ಕಣ್ಣಲಿ, ಕನಸು ನಾನು ಆಗಲೇ?
ಒಲ್ಲೆ  ನನ್ನ ಎನ್ನದೆ, ಹರಸು ನೀನು ಈಗಲೇ
ಮನಸು ತುಂಬಾ ನೀನಿರೆ.. ಎಲ್ಲಿ ನಿದಿರೆ
ನೆನೆಯಲು ನಿನ್ನನು ಮನದಿ, ನಗುತಿದೆ ಈ ಹೃದಯ
ಮರೆಯಲು ನಿನ್ನನು ಕ್ಷಣದಿ, ಮಡಿದಿದೆ ಈ ಜೀವ

ನಲ್ಲೆ ನಿನ್ನಾ ಕಣ್ಣಲಿ, ಕನಸು ನಾನು ಆಗಲೇ?
ಒಲ್ಲೆ ನನ್ನ ಎನ್ನದೆ, ಹರಸು ನೀನು ಈಗಲೇ
ಮನಸು ತುಂಬಾ ನೀನಿರೆ.. ಎಲ್ಲಿ ನಿದಿರೆ


ನಿನ ಮುದ್ದು ಮುಗುಳ್ನಗೆಯ
ಅಳಿಗುಳಿಗೆ ತಾ ಮೂಡಲು
ಒಳಗೊಳಗೆ ಹಾರುತಿಹದು
ನನ್ನ ಒಡಲು... ನಿನ್ನ.. ಬಳಿಗೆ ಬರಲು
ಆಸೆಯೊಂದು ಹುಟ್ಟಿದೆ
ನಿನ್ನ ಅಪ್ಪಿ ಕೊಳ್ಳಲೆ?
ಒಪ್ಪಿ ಬಂದ ಪ್ರೀತಿಯ
ಒಮ್ಮೆ ಹೇಳಿ ಹೋಗಲೇ?
ತಿರುಗಿ ಬಂದು ನಿನ್ನನು... ಎತ್ತಿಕೊಳಲೇ?


ನಿನ ಮಡಿಲ ಪಲ್ಲಂಗವು
ಕೈ ಬೀಸಿ ಬಾ ಎನ್ನಲು
ತಡೆ ಏನು ನನ್ನ ಮನಕೆ
ಸುಮ್ಮನಿರಲು... ಆ ಆಸೆ ಸುಡಲು
ಕಣ್ಣು ತಾನೇ ಮುಚ್ಚಿದೆ
ನಿನ್ನ ಮಡಿಲ ನೆನಪಲಿ
ಕಿವಿಯ ಕೊಟ್ಟು ಕೇಳು ನೀ
ನನ್ನ ಎದೆಯ ಚಿಲಿಪಿಲಿ
ಬಿಡದೆ ನನ್ನ ಹಿಡಿದಿಕೋ.. ಏನೇ ಬರಲಿ!!


Wednesday, June 13, 2012

ತಾ ನ ನಾ ನ ನ ತಂದ ಹಾಡು



ಮನದ ಸರಿಗಮ
ತಂದ ನಾ ನ ನ
ತಾಳ ತಪ್ಪಿದ
ಮಧುರ ಆ ಕ್ಷಣ
ಕಂಡೆ ನಿನ್ನ ನಾ
ಮರೆತೇ ನನ್ನೇ ನಾ
ಎನ್ನ ಕೊರಳಲಿ
ನಿನ್ನ ಹೆಸರಿನ
ತಾ ನ ನಾ ನ ನ


ನುಡಿಯ ನರ್ತನ
ಸ್ವರದ ಸಿಂಚನ
ಹೇಳ ಹೊರಟಿದೆ
ನನ್ನ ಒಲುಮೆಯ
ಪ್ರೀತಿ ಕಥನ
ನಿನ್ನ ದರ್ಶನ
ತಂತು ಕಂಪನ
ನನ್ನ ಮನದಲಿ
ಹೃದಯ ಹೊಸೆದಿದೆ
ಹೊಸತು ಜೀವನ


ಅರಸಿ ಬಂದೆ ನಾ
ಅರಸಿ ನೀನೆ ನಾ?
ನನ್ನ ಹರುಷದ
ಹರಕೆ ತೀರಿದೆ
ನೀನೆ ಕಾರಣ
ನನ್ನ ಈ ಮನ
ನಿನಗೆ ಅರ್ಪಣ
ಅರಳುತಿರುವ
ಪ್ರೀತಿ ಅಲ್ಲಿದೆ
ಬೆಳೆಸು ಪ್ರತಿಕ್ಷಣ

Monday, June 4, 2012

ಕಣ್ಣಲಿ ಕಾಣುವ ಕನಸುಗಳು ಮನಸನು ಕೊರೆದಾಗ ಬಂದ ಹಾಡು

"ಅಣ್ಣ ಬಾಂಡ್" ಚಿತ್ರದ "ಬೋಣಿ ಆಗದ ಹೃದಯಾನ" ಹಾಡಿನ ರಾಗದಲ್ಲಿ..



ಅಮಾವಾಸ್ಯೆ ರಾತ್ರಿಲಿ ಕರೆಂಟ್ ಹೋದ ಹೊತ್ತಲ್ಲಿ ಕರಿ ಕಾಗೆ ಓಡಿಸೋ ಕನಸು ಬೇಕಿತ್ತಾ?
ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?
ಬಿರುಗಾಳಿಯು ಬಂದಾಗ ಬೋಳ್ದು ಬಾಲಕ ನಾನಾಗಿ ಗಾಳಿಪಟ ಹಾರಿಸೋ ಕನಸು ಬೇಕಿತ್ತಾ?
ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?
ಕೋಣನ ಮುಂದೆ ಕಿಂದರಿ ಬಾರಿಸಿ ಕುಣಿಸೋಕ್ಕಾಗುತ್ತ?
ಕನಸಲಿ ಕಣ್ಣ ಮುಂದೆ ಕನ್ಯೆ ಇದ್ರೆ ಮಲಗೋಕಾಗುತ್ತ?
ನಡೆಯದೆ ಇರೋ ಅದ್ಭುತವೆಲ್ಲ ಕನಸಾಗ್ ಬರುತ್ತಾ?

ಅಮಾವಾಸ್ಯೆ ರಾತ್ರಿಲಿ ಕರೆಂಟ್ ಹೋದ ಹೊತ್ತಲ್ಲಿ ಕರಿ ಕಾಗೆ ಓಡಿಸೋ ಕನಸು ಬೇಕಿತ್ತಾ?
ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?

ನಾನು ತುಂಬ ಕೂಲ್ ಅಂತ ಕರೆಂಟ್ ಕಂಬ ಮೇಲತ್ತಿ
ಕೈಯಲಿ ಕಂಬಿ ಹಿಡಿದುಕೊಂಡು ತೂರೋಕ್ಕಾಗುತ್ತ?
ಶಾಕು ಹೊಡೆಯದೆ ಕರೆಂಟ್ ಕೂಡ ತಣ್ಣಗಾಗುತ್ತ?
ಐ ಲವ್ ಯು ಅಂತ ಹುಡುಗರು ಪ್ರಪೋಸ್ ಮಾಡಿದ ತಕ್ಷಣ
ಹುಡುಗಿ ನಾಚಿ ನೀರಾಗಿ ನಗಿಯೋಕ್ಕಾಗುತ್ತ?
ಓಡಿ ಬಂದು ಹುಡುಗನ ತಬ್ಬಿ ಕೊಳ್ಳೋಕ್ಕಾಗುತ್ತ ?
ಕೋಳಿ ಕೂಡ ಎಂ.ಜಿ ರೋಡು ದಾಟೋಕ್ಕಾಗುತ್ತ?
ಹುಡುಗಿ ಮನಸಿನ ಆಳ ತಿಳಿಯೋಕ್ ಟೇಪು ಹಿಡಿಯೋಕ್ಕಾಗುತ್ತ?
ನಡೆಯದೆ ಇರೋ ಅದ್ಭುತವೆಲ್ಲ ಕನಸಾಗ್ ಬರುತ್ತಾ?

ಅಮಾವಾಸ್ಯೆ ರಾತ್ರಿಲಿ ಕರೆಂಟ್ ಹೋದ ಹೊತ್ತಲ್ಲಿ ಕರಿ ಕಾಗೆ ಓಡಿಸೋ ಕನಸು ಬೇಕಿತ್ತಾ?
ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?

ಒಬ್ಬನೇ ಕುಂತು ಬೋರ್ ಆಗಿ ಬ್ರಹ್ಮ ಸ್ವಲ್ಪ ಹಿಂತಿರುಗಿ
ನಮ್ಮ ನಸೀಬ್ ಒಂದು ಚೂರು ಅಳಿಸೋಕ್ಕಾಗುತ್ತ?
ಕುಚೇಲನ ಕುಬೇರನಾಗಿ ಮಾಡೋಕ್ಕಾಗುತ್ತಾ?
ಪಾನಿ ಪುರಿ ತಿನ್ನುತ್ತ ರೋಡು ಸೈಡಲಿ ನಿಂತಿರೋ
ಹುಡುಗಿ ಒಮ್ಮೆ ನೋಡೋ ಹಂಗೆ ಮಾಡೋಕ್ಕಾಗುತ್ತಾ?
ವೀಲಿಂಗ್ ಮಾಡಿ ಅವಳ್ನ ಇಂಪ್ರೆಸ್ ಮಾಡೋಕ್ಕಾಗುತ್ತಾ?
ಕೋಳಿಯ ಕೇಳಿ ಮಸಾಲೇನ ಅರೆಯೋಕ್ಕಗುತ್ತ?
ಹುಡುಗಿ ಒಪ್ಪಿಗೆ ಪಡೆದು ಪ್ರೀತಿಯನ್ನ ಮಾಡೋಕ್ಕಾಗುತ್ತಾ?
ನಡೆಯದೆ ಇರೋ ಅದ್ಭುತವೆಲ್ಲ ಕನಸಾಗ್ ಬರುತ್ತಾ?

ಮಜ್ನುನ ಮರೆತ ಲೈಲಾ, ದೇವದಾಸ್ ನ ಬಿಟ್ಟ ಪಾರು ಒಟ್ಟಿಗೆ ಪ್ರಪೋಸ್ ಮಾಡುವ ಕನಸು ಬೇಕಿತ್ತಾ?

Wednesday, April 11, 2012

ಹುಡುಗಾಟದ ಹುಡುಗನ ಹುಡುಕಾಟದ ಹಾಡು

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು
ಬೆಲೆ ಕಟ್ಟದ ಸೆಲೆ ನಿನ್ನದೇ
ನೆಲೆ ಇಲ್ಲದೆ ಅಲೆದಾಡಿದೆ
ಹುಡುಕಾಡಿದೆ ತೊಡಕಾಗದೆ
ನನ್ನೆದುರು ನೀ ನಿಲಬಾರದೆ

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು

ಸ್ವರವಿಲ್ಲದೇನೆ ಸಂಗೀತ ಒಂದು
ಸನಿಹಕ್ಕೆ ಬಂದು ನನ ತಾಕಿದೆ
ಪದವಿಲ್ಲದೇನೆ ಪಲ್ಲವಿ ಒಂದು
ಪಕ್ಕಕ್ಕೆ ಬಂದು ಹಾಡಾಗಿದೆ
ಆ ರಾಗವು ಈ ಹಾಡಿಗೆ
ಬೆರೆತಾಗಿದೆ ಇನ್ನೇನಿದೆ
ನೀ ಒಪ್ಪಿಗೆ ಕೊಡಬಾರದೇ
ನನ್ನೊಳಗೆ ನೀ ಬೆರಿಬಾರದೆ

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು

ಹನಿ ಇಲ್ಲದೇನೆ ಹಣೆ ಮೇಲೆ ಒಂದು
ತಣ್ಣೀರ ತೊಟ್ಟು ಹರಿದಾಡಿದೆ
ಆ ಸೃಷ್ಟಿಕರ್ತ ಸರಿ ಮಾಡಿ ಇಟ್ಟ
ಹಣೆ ಬರಹ ಚೂರು ಬದಲಾಗಿದೆ
ಕನಸಲ್ಲಿಯು ಕಂಡರಿಯದ
ಸೊಗಸಾಗಿ ನೀ ಬರಬಾರದೇ
ಮುದುಡೋಗಿರೋ ಮನಸಿಲ್ಲಿದೆ
ಮುತ್ತೊಂದನು ಕೊಡಬಾರದೇ

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು

Tuesday, February 21, 2012

ಸಂಗಾತಿಯ ಸವಿನೆನಪಿನ ಸವಿಯಲ್ಲಿ ಸುರಿದ ಹಾಡು

ಗೋಪಿಕೃಷ್ಣ ಚಿತ್ರದ ಓಹೋ ವಸಂತ ಹಾಡಿನ ರಾಗದಲ್ಲಿ...

ಓಹೋ ಸಂಗಾತಿ.. ಕಡಲ ಕಡೆವ ರೀತಿ
ಓಹೋ ಸಂಗಾತಿ... ಮನವ ಕಲುಕೋ ಪ್ರೀತಿ
ಹೃದಯದೋಲೆ ಓದುವ ವೇಳೆ... ಅಕ್ಷರವೇ ನೀನಾಗು ಪದಗಳಿಗೆ ಉಸಿರಾಗು
ಅಲ್ಲಿ ಮಲ್ಲಿಗೆ ಮಂಚ,
ಮಲ್ಲೆ ಅರಳಲು ಕೊಂಚ,
ನಿನ್ನ ಬಣ್ಣದ ಸಿಂಚನ
ಚಿತ್ರ ಬಿಡಿಸುವ ಕುಂಚ,
ಕೈಯ ಜಾರಿದೆ ಕೊಂಚ
ಹರೆಯ ಮಿರ್ಕಟ ಜೋಪಾನ
ಸಂಗಾತಿ ಸಂಗದಲ್ಲಿ ಸಂತೇಲಿ ಕುಂತರೇನು..
ಬಂಗಾರಿ ಬಗಲಲ್ಲಿ ನಿದ್ದೆಯು ಬರದೇನು...
ಕಣ್ಣ ಅಂಚಲ್ಲಿ ಮಿಂಚು,
ಕನಸ ಕೊಲ್ಲುವ ಸಂಚು,
ಅಲ್ಲೂ ನಿನ್ನಯ ಚಿತ್ರಣ..

ಓಹೋ ಸಂಗಾತಿ
ಕನಸ ರಾಜ ನೀತಿ
ಓಹೋ ಸಂಗಾತಿ
ಮನಸ ಅರಸ ಪ್ರೀತಿ
ಅರಮನೇಲು ನಾ ಸೆರೆಯಾಳು
ಚಿಮ್ಮುತಿದೆ ಧುಮ್ಮಿಕ್ಕಿ
ಪ್ರೀತಿಯೆಂಬೋ ಭರಚುಕ್ಕಿ
ಬಿಡಿಸೋ ಈ ನನ್ನ ಸೆರೆ
ಎಳೆಯೋ ವಿರಹಕ್ಕೆ ತೆರೆ
ಎರೆಯೋ ಪ್ರೀತಿಯ ಧಾರೆ

ಓಹೋ ಸಂಗಾತಿ
ಚಳಿಯ ಥಳಿಸೋ ರೀತಿ
ಓಹೋ ಸಂಗಾತಿ
ಬೆಚ್ಚನೆ ಅಪ್ಪುಗೆ ಪ್ರೀತಿ
ನಡುಗೋ ಮೈಯ ಸುಡುವ ಸೂರ್ಯ
ಸಂಗಾತಿಯೇ ನೀನಾಗು
ಈ ಜೀವಕೆ ಉಸಿರಾಗು
ಅಲ್ಲಿ ಮಲ್ಲಿಗೆ ಮಂಚ,
ಮಲ್ಲೆ ಅರಳಲು ಕೊಂಚ,
ನಿನ್ನ ಬಣ್ಣದ ಸಿಂಚನ
ಚಿತ್ರ ಬಿಡಿಸುವ ಕುಂಚ,
ಕೈಯ ಜಾರಿದೆ ಕೊಂಚ
ಹರೆಯ ಮಿರ್ಕಟ ಜೋಪಾನ
ಸಂಗಾತಿ ಸಂಗದಲ್ಲಿ ಸಂತೇಲಿ ಕುಂತರೇನು..
ಬಂಗಾರಿ ಬಗಲಲ್ಲಿ ನಿದ್ದೆಯು ಬರದೇನು...

ಲಾಲ ಲಾಲಾಲ ಲಾಲ ಲಾಲ ಲಾಲಾಲ ಲಾಲ ಲಾಲ ಲಾಲಾಲ ಲಾಲಾಲ