Wednesday, February 19, 2014

ನವಿರಾದ ಪ್ರೇಮದ ನಿವೇದನೆಗೆ ನಿರುತ್ತರದ ನಿರಾಸೆಯಾಗದಿದ್ದಾಗ ನುಲಿದ ಹಾಡು



ಹೃದಯದ ಈ ಮೊದಲ ಪುಟದಲಿ 
ಮೂಡಿರೋ ಮುದ್ದಾದ ಪದದಲಿ 
ತುಂಬಿದೆ ನೀನಾಡೋ ಚಿಲಿಪಿಲಿ 
ನಾದ ಕೇಳೆಯಾ..?
ತಂಗಾಳಿ ಮೈಯ ಸೋಕಲು 
ತಾನಾಗೆ ಕಣ್ಣು ಮುಚ್ಚಲು 
ನೀನ್ಯಾಕೆ ನನ್ನ ಕಾಡುವೆ 
ಚೆಲುವೆ...?

ಬೆಳ್ಳಿ ಮೋಡ ನಡುವಲಿ ಓಡಿ
ಚುಕ್ಕಿ ತಾರೆ ಉಡುಗೊರೆ ನೀಡಿ 
ನನ್ನ ಪ್ರೀತಿ ನಿನ್ನ ಎದುರು ನಾ ತೋರಲೇ??
ಇಲ್ಲ ಎಂದು ತೊರೆಯದೆ ನನ್ನ  
ಒಂದೊಮ್ಮೆ ನೋಡು.. ಈ ನನ್ನ ಪಾಡು 
ನೀನಿಲ್ಲದ ಹೃದಯ.. ಮಿಡಿಯುವುದ ಮರೆತಿದೆ.. 

ಎಲ್ಲೋ ಇರುವ ಬೆಟ್ಟದ ಮೇಲೆ 
ನಿಂತು ಕಾಣೋ ಹಸಿರಿನ ಸಾಲೆ 
ನನ್ನ ಪ್ರೀತಿ ಅಗಲ ಎದುರು ಬಲು ಚಿಕ್ಕದು 
ಕ್ಷಣ ಕೂಡ ತಡವನು ಮಾಡದೆ 
ಬಾ ನನ್ನ ಒಪ್ಪು ಈ ಮನವ ಅಪ್ಪು 
ಉಸಿರಾಗುವೆ ನಿಂಗೆ.. ನನ್ನುಸಿರು ಇರೋವರೆಗೂ 


ಕನಸಲಿ ನಾ ಕೋರೋ ಹುಡುಗನ 
ಎದುರಲಿ ತಂದಿಟ್ಟ ದೇವನ 
ಮನದಲಿ ನೆನೆಯುತ್ತ ಹಾಡುವೆ 
ಒಮ್ಮೆ ಕೇಳೆಯಾ.. ?
ಆ ಬಾನು ಸೀಳಿ ಹೋಗಲಿ 
ಈ ಭೂಮಿ ಬಿರಿದು ಹೋಗಲಿ 
ನಾ ನಿನ್ನ ತೋಳಲೇ ಇರುವೆನು 
ಬಾರೋ...!




Saturday, September 14, 2013

ಸ್ವರ ಸಿಂಚನದ ರಾಗ ರಂಜನೆಯಲ್ಲಿ ರಚಿಸಿದ ಹಾಡು


ಆ ಸರಿಗಮದ ಸ್ವರದ ತಂತಿ ನರದಲಿ
ನಾ ಬಚ್ಚಿಟ್ಟ ರಾಗ ಕೊಂಚ ಕೊಂಚ ಹೊಮ್ಮಿದೆ
ಈ ಪಲ್ಲವಿಯ ಮೊದಲ ಸ್ವರದ ಪದದಲಿ
ಆ ನಿನ್ನ ಒಲವು ಅವಿತು  ಕುಳಿತು ಸೆಳೆದಿದೆ
ಓ ಒಲವೇ ....

ಈ  ಮನಸೆಂಬ ನವಿಲು ಗರಿಯ ಕೆದರಿ ಕುಣಿದಿದೆ
ಆ ನಿನ್ನ ಪ್ರೀತಿ ಸ್ಪರ್ಶ ಸೋಕಿದ್ಹರ್ಷದಿ
ನಾ ಕನಸಲ್ಲಿ ಕಾಣೋ ಸಹಜ ಸರಳ ಸುಂದರಿ
ನೀನೆಂದು ತಿಳಿದು ಹೃದಯಕ್ಕೀಗ ನೆಮ್ಮದಿ
ಓ ಚೆಲುವೇ ...

ಈ ಒಲವೆಂಬ ಮಧುರ ಪದ್ಯ ಸದ್ಯ ಕಾದಿದೆ
ಆ ಎರಡೆರಡು ಮನಸ ಮಧ್ಯ ಆಗೋ ಮಿಲನಕೆ
ಹೇ ಚೆಲುವಮ್ಮ ನೀನು ಚರಣವಿರದ ಕವನವೆ
ಆ ಕವನ ನಾನು ಕಣ್ಣ ತುಂಬಿಸಿಕೊಳ್ಳಲೆ
ಓ ಕನಸೇ ...


Tuesday, July 9, 2013

ಜಂಟಿಯತನ ಒಂಟಿಯತನವನ್ನು ಒಂಟೆಯ ಮೇಲೆ ಕೂರಿಸಿ ಓಡಿಸಿದಾಗ ಹುಟ್ಟಿದ ಹಾಡು


ಸರಿಗಮ ಸ್ವರದ ಮೇಲೆ
ಮನದ ಪ್ರೇಮ ಕುಣಿವ ವೇಳೆ
ಅರಿತು ಜೋಡಿಯ
ನರದ ನಾಡಿಯು
ಬರೆದ ಹಾಡಿದು
ಹಾಡುತ್ತಿರುವೆ ಕೇಳೆ ಚೆಲುವೆ

ಒಂಟಿಯತನಕೆ ವಂದನೆ ಹೇಳೋ ಸಮಯ
ಜಂಟಿಯ ಅಪ್ಪುಗೆ ಮನಕೆ ಆನಂದಮಯ
ಮುಗಿಲನು ಮುಟ್ಟಿ ಮುತ್ತನು ನೀಡುವೆ ಈಗ
ಮನದಲಿ ಮೂಡಿದೆ ಮದನನ ಮೀರಿಸೋ ವೇಗ
ಚಿನ್ನ ಎನ್ನಲಿ
ರನ್ನ ಎನ್ನಲಿ
ನಿನ್ನ ನೆನಪಲಿ
ನಿನಗೆ ಸೋತೆ... ಜಗವ ಮರೆತೆ

ಚಿಲಿಪಿಲಿ ಕೂಗೋ ಹಕ್ಕಿಯ ಒಳಗಡೆ ಸೇರಿ
ಅರಗಿಳಿ ನಿನ್ನ ಹುಡುಕುತ ಬರುವೆನು ಹಾರಿ
ಕುಹೂ ಕುಹೂ ಕೂಗೋ ಕೋಗಿಲೆ ಕೊರಳಲಿ ಸೇರಿ
ಕ್ಷಣ ಕ್ಷಣ ಕೂಗುವೆ ನಿನ್ನನೆ ಸಾವಿರ ಬಾರಿ
ದನಿಯ ಕೇಳುತ
ಸನಿಹ ಬಯಸುತ
ಇನಿಯನರಸುತ
ಒಮ್ಮೆ ಬಾರೆ.. ನನ್ನ ಸೇರೆ!!


ಸರಿಗಮ ಸ್ವರದ ಮೇಲೆ
ಮನದ ಪ್ರೇಮ ಕುಣಿವ ವೇಳೆ
ಅರಿತು ಜೋಡಿಯ
ನಾರದ ನಾಡಿಯು
ಬರೆದ ಹಾಡಿದು
ಹಾಡುತ್ತಿರುವೆ ಕೇಳೆ ಚೆಲುವೆ

Tuesday, March 26, 2013

ಕನಸು ಕಲಿಸಿ ಮನಸ ಕುಣಿಸಿದವನಿಗೆ...

ಕಣ್ಣಲಿ ಕನಸು ತುಂಬಿದವನೆ
ಕನಸಿಗೆ ಬಣ್ಣ ಹಚ್ಚಿದವನೇ
ಬಣ್ಣಕೆ ಮೆರಗು ಕೊಟ್ಟ ಒಡನೆ
ಕುಣಿದಿದೆ ನನ್ನ ಹೃದಯ ಮೆಲ್ಲನೆ
ಹಾಡುತ ನಿನ ಹೆಸರನು ಪ್ರತಿ ಉಸಿರಲಿ..

ನನ್ನ ಹೃದಯದ ಪಿಸುಮಾತನು
ಕದ್ದು ಕೇಳಿದ ನೀ ಚೋರನು
ಕೇಳಿಯೂ ನಾನು ಕಿವುದನು
ಎಂದು ನಟಿಸುವ ನೀ ಪೋರನು
ಎಲ್ಲಿದೆಯೋ ನನ್ನಲಿ ನನ್ನದೇ ಮನಸು
ಕೈ ಮುಗಿವೆ ನೀ ತಿಳಿ ನೀನೆ ನನ ಕನಸು
ಕಿರು ಬೆರಳ ಹಿಡಿದೆನ್ನನು ನಡೆಸು
ಮರು ಮಾತು ಆಡದೆ ಬರುವುದೀ  ಮನಸು

ನನ್ನ ಕಾಲ್ಗೆಜ್ಜೆಯು ಘಲ್ಲೆನುತ
ನಿನ ಹೆಸರನೆ ಕೂಗಿ ಹೇಳಿದೆ
ಕೈಯ ಬಳೆಗಳು ಝಲ್ಲೆನುತ
ನಿನ ದನಿಯನೆ ಪ್ರತಿಧ್ವನಿಸಿದೆ
ನಾ ತೊಡುವ ರೇಶಿಮೆಯ ಸೀರೆಯ ಸೆರಗನ್ನು
ಮೆಲ್ಲ ಎಳೆದರಳಸಿ ನೋಡು ಒಮ್ಮೆ ನೀನು
ಅಲ್ಲಿದೆಯೋ ನಿನ್ನದೇ ಮುಖವಿರುವ ಚಂದ್ರ
ಕೊಟ್ಟುಬಿಡು ನಿನ ಮನಸು ಹೃದಯದಿ ಬಚ್ಚಿಡುವೆ ಭದ್ರ!!

Friday, March 15, 2013

ಏರು ಪೇರು ಆದ ಮನಸ ಚೂರು ನೂರು ಪದದಿ ಬರೆದ ಹಾಡು



ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 
ನಿನ್ನ ನಡೆಯ ತಡೆದು ನೋಡು ನನ್ನ ಇವತ್ತು 
ಓಡೋ ನನ್ನ ಮಾನಸ ಸ್ಪೀಡು ನೂರ ಇಪ್ಪತ್ತು 
ಎಂದು ನಿನ್ನ ಬಂದು ಸೇರೋ ಎಂಬ ಅವಸರ 
ಎದೆಯ ಬಡಿತ ಏರುತಿದೆ ಸೊಂಯ್ಯ ಸರ ಸರ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

ನನ್ನ ಹೃದಯ ಥೇಟರಲ್ಲಿ ನಿನ್ನ ಸಿನೆಮವು 
ಓಡುತಿದೆ ನಿಲ್ಲದೇನೆ ಏನು ಮಹಿಮೆಯು 
ನನ್ನ ಮಾನಸ ಅಂಗಳದಿ ನಿನ್ನ ಆಟ 
ಸಾಗುತಿದೆ ಹೇಳುತ್ತಾ ಪ್ರೇಮ ಪಾಠ 
ಅ ಆ ಇ ಈ ಕೂಡ ಈಗ ಮರೆತು ಹೋಗಿದೆ 
ಒಂದು ನಾಲ್ಕು ಆರು ಎಂಟು ಮುಂದೆ ಏನಿದೆ 
ಅಯ್ಯೋ ರಾಮ ಎದ್ದು ಬಿದ್ದು ಹುಚ್ಚು ಹಿಡಿಯಿತ?
ದೂರ ನಿಂತು ಕದ್ದು ಕದ್ದು ಇವಳ ನೋಡುತ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

ಗಾಳಿ ಪಟದ ಹಾಗೆ ನೀನು ಮೇಲೆ ಹಾರಿದೆ 
ನಿನ್ನ ಹಿಂದೆ ನಾನು ಕೂಡ ತೇಲಿ ಬಂದೆ 
ಅರಿಯ ನಾನು ಹಾರಿದೆ ಹೋಯ್ತು ನನ್ನ ಸೂತ್ರ 
ಗಿರಕೆ ಹೊಡೆದು ಧರೆಗೆ ಬಿದ್ದೆ ನಾನು ಮಾತ್ರ 
ಗಂಧವನ್ನು ತಿದ್ದಿ ತೀಡಿ  ಅರೆದ ಅಂದವ 
ಬ್ರಹ್ಮ ಎಲ್ಲ ನಿಂಗೆ ಕೊಟ್ಟು ಮಾಡ್ದ ಮೋಸವ 
ಕುರುಹು ಕೂಡ ಸಿಗದ ರೀತಿ ಶುರುವು ಪ್ರೇಮ 
ಸನಿಹ ಎಂದು ಬರುವೆ ಪ್ರೀತಿ ಅಯ್ಯೋ ರಾಮ 

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ
ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ 

Friday, November 2, 2012

ಕನ್ನಡ ರಾಜ್ಯೋತ್ಸವದ ಹಾಡು


ಕುಹೂ ಕುಹೂ ಕೂಗುವ ಕೋಗಿಲೆ ದನಿಯಲು ಕೇಳಿದೆ ನನ್ನ ಕನ್ನಡ
ಸರಿಗಮ ಸೂಸುವ ವೀಣೆಯ ನಾದದಿ ಹೊಮ್ಮಿದೆ ನನ್ನ ಕನ್ನಡ
ಉಸಿರಾಡುವ ಗಾಳಿಯ ಕಣ ಕಣದಲ್ಲೂ ಕಂಪನು ಬೀಸಿದೆ ಕನ್ನಡ
ಮಗುವಿನ ತೊದಲ ಮಾತಲು ನುಲಿದಿದೆ ನನ್ನೀ ಭಾಷೆಯು ಕನ್ನಡ

ನೇಗಿಲ ಯೋಗಿಯು ಬಿತ್ತಿದ ಭತ್ತದ ತೆನೆ ತೆನೆಯಲ್ಲೂ ಕನ್ನಡ
ಈ ಮಣ್ಣಿನ ಮಗನ ಮೈಯಲಿ ಹರಿಯುವ ಪ್ರತಿ ಹನಿ ನೆತ್ತರು ಕನ್ನಡ
ಮುಂಜಾನೆಯ ಹೊತ್ತಲಿ ಹಕ್ಕಿಯ ಚಿಲಿಪಿಲಿ ಮಾತಲು ನುಲಿದಿದೆ ಕನ್ನಡ
ಏಳು ಬಣ್ಣದ ಕಾಮನ ಬಿಲ್ಲಿನ ಪ್ರಜ್ವಲ ಬೆಳಕಲು ಕನ್ನಡ

ಕವಿ ಕೊಟಿಯು ರಚಿಸೋ ಕವನವ ಕಂಡರೆ ಪ್ರತಿ ಪದದಲ್ಲೂ ಕನ್ನಡ
ಸಂಗೀತ ಋಷಿಗಳು ಹಾಡುವ ಪ್ರತಿ ಹಾಡಿನ ಸ್ವರದಲು ಕನ್ನಡ
ಮೈ ತುಂಬಿ ಹರಿಯುವ ಕಾವೇರಿ ತಾಯಿಯ ಜುಳು ಜುಳು ನಾದವು ಕನ್ನಡ
ತಂಪಾದ ಗಾಳಿಗೆ ತಲೆಯನು ತೂಗೋ ಹಸಿರೆಲೆ ಬೀಸಿದೆ ಕನ್ನಡ

ಈ ಕರುನಾಡಿನ ಕೆಚ್ಚೆದೆ ಗಂಡಿನ ಹೃದಯವ ಬಗೆದರು ಕನ್ನಡ
ಈ ನೆಲದಲ್ಲಿ ಹುಟ್ಟಿದ ಮನುಜನು ತೋರುವ ಪ್ರೀತಿಲು ಕನ್ನಡ
ಕಲ್ಲಿನ ಕೋಳಿ ಕೂಗಿದರು ಕೂಡ ಕೇಳುವುದೊಂದೇ ಕನ್ನಡ
ಪ್ರಳಯವೇ ಆದರು ಉಳಿಯಲೇಬೇಕು ಮಾತನು ಕೊಟ್ಟ ಕನ್ನಡ!!

Sunday, October 21, 2012

ಇಡ್ಲಾ ಮಾಡ್ಲಾ ಹಾಡ್ ಬರೀಲಾ ಅಂದಾಗ ಬಂದ ಹಾಡು


ಡ್ರಾಮ ಚಿತ್ರದ "ಚೆಂದುಟಿಯ ಪಕ್ಕದಲ್ಲಿ" ಹಾಡಿನ ರಾಗದಲ್ಲಿ!


ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?
ಹಾರಾಡೋ ಹಕ್ಕಿಗಳ ರೆಕ್ಕೆಗಳ ಕಟ್ಟಿಟ್ಟು ನಿನ ಜೊತೆ ಆಗಸದಿ ತೇಲಾಡ್ಲಾ?
ಕಣ್ ಮುಚ್ಚಿ ನಿನ ನೆನೆದ ನೆನಪಿಂದ
ನಾ ಬರೆದ ನಾನಿರುವ ಕನಸೊಂದ
ನಿನ ಕಣ್ಣ ಕೊನೆಯಲ್ಲಿ ಬಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ತಂಪಾದ ಈ ಹೊತ್ತು ತಂಗಾಳಿ ಬೀಸುತಿದೆ ಹಿಡಿದಿಡಿದು ನಿನ ಉಸಿರ ಜೊತೆಯಲ್ಲಿ ಬೆರೆಸ್ಲಾ?
ರೇಶಿಮೆಯ ಚೆಲುವನ್ನು ಎಣೆದೆಣೆದು ನಾ ತಂದು ನಿನ ಸೀರೆ ಸೆರಗಲ್ಲಿ ಚಿಟ್ಟೆಯಾಗ್ ಇಡ್ಲಾ?
ನನ್ನೆದೆಯ ಗೂಡಲ್ಲಿ ಗುಡಿಯೊಂದು
ಕಟ್ಟಿರುವೆ ನಿನ್ನನ್ನೇ ನೆನೆ ನೆನೆದು
ನಿನ ಚಿತ್ರವ ಅಲ್ಲಿ ಕೆತ್ತಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಹೂದೋಟ ಅಲ್ಲಿಹುದು ಹೂವೆಲ್ಲ ಅರಳಿಹುದು ಪ್ರತಿಯೊಂದು ಹೂವಲ್ಲು ನಾ ಕಂಡೆ ನಿನ್ನ
ಇರುಳಲ್ಲು ಕಂಡಿಹುದು ನಿನ್ನಲ್ಲಿಗೆ ದಾರಿ ಕಣ್ಮುಚ್ಚಿ ಬಂದಿರುವೆ ಬರಮಾಡೆ ನನ್ನ
ಬೆಟ್ಟದ ಮೇಲಿರುವ ಸಿಹಿ ಜೇನ
ನಿನಗಾಗಿ ನಾನೀಗ ತರಲೇನ?
ನಿನ ತುಟಿಯಲಿ ಅದನು ಮುಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಆ ಮೋಡದಂಚಿಂದ ಮೈ ಮರೆತು ಜಾರಿದ ಮೊದ ಮೊದಲ ಮಳೆ ಹನಿಯು ನೀನೇನಾ ಚೆಲುವೆ?
ಮಳೆ ಹನಿಯು ತಾಗುತಲಿ ಮನ ಬಿಚ್ಚಿ ಹಾಡುವ ಕೋಗಿಲೆಯ ದನಿಯನ್ನು ಕೈ ಮುಚ್ಚಿ ತಡೆವೆ
ಹಾಡೊಂದ ನಾನೀಗ ಬರೆದಿರುವೆ
ಪ್ರತಿ ಪದದಿ ನಿನ್ಹೆಸರೆ ತುಂಬಿರುವೆ
ನಿನ ಮುಂದೆ ಅದನೀಗ ನಾ ಹಾಡ್ಲಾ ?